

ಧಾರವಾಡ: ಗಣಪತಿ ಹಬ್ಬ ತನ್ನದೇ ಆದ ವಿಶಿಷ್ಟ ಸಂಭ್ರಮವನ್ನು ಜೊತೆಗೆ ತರುತ್ತದೆ. ಕಲಾವಿದರು ವಿವಿಧ ಭಂಗಿಗಳಲ್ಲಿ ಸೃಷ್ಟಿಸುವ ಗಣೇಶ ಮೂರ್ತಿಗಳನ್ನು ರಂಗುರಂಗಿನ ಪೆಂಡಾಲುಗಳಲ್ಲಿ ನೋಡುವುದೇ ಚೆಂದ. ಇಂಥದ್ದೇ ಮೆರುಗನ್ನು ಮನೆಯಲ್ಲೇ ಸೃಷ್ಟಿಸಿ, 11 ದಿನಗಳ ವೈಭವಯುತ ಗಣೇಶೋತ್ಸವವನ್ನು, ಧಾರವಾಡದ ಅಸ್ಟೇಕರ್ ಕುಟುಂಬ ಆಚರಿಸುತ್ತಿದೆ.
ಧಾರವಾಡದ ಗಾಂಧಿನಗರದ ಶಾಂಭವಿ ಕಾಲೊನಿಯಲ್ಲಿರುವ ದೀಪಕ್ ಮತ್ತು ಪ್ರಶಾಂತ್ ಅಸ್ಟೇಕರ್ ಅವರ ನಿವಾಸದಲ್ಲಿ ಥರ್ಮಾಕಾಲ್ನಲ್ಲಿ ರಚಿಸಲಾಗಿರುವ ಭವ್ಯ ಭವನದಲ್ಲಿ ಗಣಪತಿಯ ಪೂಜೆ ನೆರವೇರುತ್ತಿದೆ. ದೀಪಾಲಂಕಾರ ಸಮೇತವಾಗಿರುವ ಈ ಮಂಟಪವು, ಸುಮಾರು 12 ಅಡಿ ಎತ್ತರ ಮತ್ತು 16 ಅಡಿ ಅಗಲವಿದ್ದು, ಮನೆಯ ಲಿವಿಂಗ್ ರೂಮನ್ನು ಆವರಿಸಿದೆ.
"ಇಡೀ ಕುಟುಂಬ ಸೇರಿ ಕೈಗಳಿಂದಲೇ ನಿರ್ಮಿಸಿರುವ ಈ ಮಂಟಪವನ್ನು ಕಟ್ಟಲು 20 ದಿನಗಳು ಹಿಡಿದವು. ಬಾಹುಬಲಿ ಚಿತ್ರ ಬಂದಾಗಿನಿಂದ ಪ್ರತಿವರ್ಷ ಈ ರೀತಿ ಗಣಪತಿ ಮಂಟಪ ನಿರ್ಮಿಸಲು ಆರಂಭಿಸಿದ್ದೇವೆ. ಈ ಬಾರಿ ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ನಿರ್ಮಾಣವಾಗುತ್ತಿರುವ ವೇದಿಕ್ ಇಸ್ಕಾನ್ ಟೆಂಪಲ್ನ ಮಾದರಿಯಲ್ಲಿ ಕಟ್ಟಿದ್ದೇವೆ" ಎಂದು ದೀಪಕ್ ಅಸ್ಟೇಕರ್ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಗಣಪತಿಗಾಗಿ ವೈಭವಪೂರ್ಣ ಮಂಟಪವನ್ನು ನಿರ್ಮಿಸುವ ಪದ್ಧತಿಯನ್ನು ಈ ಕುಟುಂಬದವರು ರೂಢಿಸಿಕೊಂಡು ಬಂದಿದ್ದಾರೆ. ಕರೊನಾ ನಿರ್ಬಂಧಗಳಿಂದಾಗಿ ಅದ್ಧೂರಿ ಗಣಪತಿ ದರ್ಶನ ಮಿಸ್ ಆಗಿರುವ ಈ ಸಂದರ್ಭದಲ್ಲಿ, ಅಸ್ಟೇಕರ್ ನಿವಾಸದ ಗಣಪತಿ ಕಣ್ಮನ ತುಂಬುವಂತಿದೆ.