ಉಗ್ರಾತಂಕ! ಹೈ ಅಲರ್ಟ್​ನಲ್ಲಿ ಮೈಸೂರು, ಬೆಂಗಳೂರು

b-m
Published on

ಬೆಂಗಳೂರು/ಮೈಸೂರು: ದೆಹಲಿ ಪೊಲೀಸರಿಂದ 6 ಮಂದಿ ಉಗ್ರರ ಬಂಧನ ನಡೆದಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾದ್ಯಂತ ಹಾಗೂ ಬೆಂಗಳೂರಿನಲ್ಲಿ ಫುಲ್​ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ಉಗ್ರರ ಹಿಟ್​ ಲಿಸ್ಟ್​ನಲ್ಲಿ ಕರ್ನಾಟಕದ ಈ ಎರಡು ನಗರಗಳು ಕೂಡ ಇದ್ದ ಬಗ್ಗೆ ದೆಹಲಿಯಿಂದ ರಾಜ್ಯಕ್ಕೆ ಸೂಚನೆ ರವಾನೆಯಾಗಿರುವುದೇ ಇದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಬಂಧಿತ ಉಗ್ರರು ಅನೇಕ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೇಚ್ ಹಾಕಿದ್ದರು. ತನಿಖೆ ವೇಳೆ ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಪ್ಲಾನ್ ನಡೆಸಿದ್ದರು ಎಂದು ತಿಳಿದುಬಂದಿದೆ. ಈ ಹಿಟ್ ಲಿಸ್ಟ್​ನಲ್ಲಿ‌ ಕರ್ನಾಟಕದ ಮೈಸೂರು ಹಾಗೂ ಬೆಂಗಳೂರು ಒಂದಾಗಿದ್ದು, ದಸರಾವನ್ನ ಟಾರ್ಗೇಟ್ ಮಾಡಿದ್ದ ಮಾಹಿತಿ ಬಹಿರಂಗವಾಗಿದೆ. ಸದ್ಯ ಮೈಸೂರಿನಲ್ಲಿ‌ ಎಚ್ಚರ ವಹಿಸಲು ದೆಹಲಿಯಿಂದ ಸೂಚನೆ ರವಾನೆಯಾಗಿದೆ ಎನ್ನಲಾಗಿದೆ.

ಅಪರಿಚಿತ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾಕ್ಕೆ ಸೂಚನೆ ನೀಡಲಾಗಿದೆ. ಮೈಸೂರು ಅರಮನೆ ಮತ್ತು ದಸರಾ ನಡೆಯುವ ಕಡೆ ಪೊಲೀಸರು ಪ್ರತಿದಿನ ತಪಾಸಣೆಗೆ ಮುಂದಾಗಿದ್ದಾರೆ. ಆ ಭಾಗದಲ್ಲಿ ಓಡಾಡುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇಡಲು ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್​​ ಪಡೆ ಸಿದ್ಧವಾಗಿದೆ: ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​, ಬೆಂಗಳೂರಿನಲ್ಲಿ ಫುಲ್ ಫ್ಲೆಡ್ಜ್ ಆಗಿ ನಮ್ಮ ಪೊಲೀಸ್ ಫೋರ್ಸ್ ಯಾವಾಗ್ಲೂ ಅಲರ್ಟ್ ಆಗಿದೆ. ಹೀಗಾಗಿ ಯಾವುದೇ ಸಮಸ್ಯೆ ಬಂದರೂ ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದಿದ್ದಾರೆ.

"ನಮ್ಮಲ್ಲಿ ಒಳ್ಳೇ ಫೋರ್ಸ್​​ಗಳಿವೆ. ಗರುಡಾ ಆಗಿರಬಹುದು, ಹೊಯ್ಸಳ ಆಗಿರಬಹುದು - ನಮ್ಮಲ್ಲಿ ಪೊಲೀಸ್ ಫೋರ್ಸ್ ತುಂಬಾ ಅಲರ್ಟ್ ಆಗಿದೆ. ಅಷ್ಟಲ್ಲದೆ ಸ್ವಾಟ್​​ನಂತಹ ಕಮಾಂಡರ್ಸ್ ತಂಡ ಕೂಡ ಈಗಾಗಲೇ ಸಿದ್ಧವಾಗಿದೆ. ಒಂದಷ್ಟು ತಂಡ ತರಬೇತಿಯಲ್ಲಿದ್ದಾರೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net