ಅಭಿವೃದ್ಧಿಗೆ ಗ್ರಾಪಂ ಸದಸ್ಯೆ ಕಿರಿಕ್?

ಶಿಡ್ಲಘಟ್ಟದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಜೆ.ವೆಂಕಟಾಪುರ ಗ್ರಾಪಂ ಅಧ್ಯಕ್ಷ ಎನ್.ನಾಗೇಶ್ ಮಾತನಾಡಿದರು. ಸದಸ್ಯರಾದ ಟಿ.ನಾರಾಯಣಸ್ವಾಮಿ, ತಿರುಪಳ್ಳಪ್ಪ, ಇತರರು ಇದ್ದರು.
03 SDLP 02
ಶಿಡ್ಲಘಟ್ಟದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಜೆ.ವೆಂಕಟಾಪುರ ಗ್ರಾಪಂ ಅಧ್ಯಕ್ಷ ಎನ್.ನಾಗೇಶ್ ಮಾತನಾಡಿದರು. ಸದಸ್ಯರಾದ ಟಿ.ನಾರಾಯಣಸ್ವಾಮಿ, ತಿರುಪಳ್ಳಪ್ಪ, ಇತರರು ಇದ್ದರು.
Published on

ಪಂಚಾಯಿತಿ ಆಡಳಿತದ ಅರಿವಿಲ್ಲ ಎಂದ ಅಧ್ಯಕ್ಷ - ಅಧಿಕಾರಿಗಳಿಗೆ ಬೆದರಿಕೆ ಆರೋಪ


ಶಿಡ್ಲಘಟ್ಟ: ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಬಗ್ಗೆ ಅರಿವಿಲ್ಲದ ಸದಸ್ಯೆಯೊಬ್ಬರು ಸುಖಾಸುಮ್ಮನೆ ಆರೋಪ ಮಾಡುವುದು, ಸುಳ್ಳು ದೂರು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ನಾಗೇಶ್ ಆರೋಪಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 30ರಂದು ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸಾಮಾಜಿಕ ಪರಿಶೋಧನಾ ಸಭೆ ನಡೆದಿದ್ದು, ಅದಕ್ಕೆ ಸಂಬಂಧಿಸಿದಂತೆ ಕರಪತ್ರ ಹಂಚಿದ್ದೇವೆ. ಎಲ್ಲ ಸದಸ್ಯರು, ನೋಡಲ್ ಅಧಿಕಾರಿ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೂ ಮಾಹಿತಿ ನೀಡಲಾಗಿದೆ. ಸಾಮಾಜಿಕ ಪರಿಶೋಧನಾ ಸಭೆಯ ಭಾವಚಿತ್ರಗಳನ್ನು ತೆಗೆಸಿದ್ದೇವೆ, ವಿಡಿಯೋಗಳು ಇವೆ. ನಿಯಮದಂತೆ ಸಭೆ ನಡೆದಿದೆ. ಆದರೆ, ಸದಸ್ಯೆ ಶಶಿಕಲಾ ಅವರು ಮಾತ್ರ ಪರಿಶೋಧನಾ ಸಭೆಯನ್ನು ಗ್ರಾಮಸಭೆ ಎಂದು ತಪ್ಪಾಗಿ ಅರ್ಥೈಸಿಕೊಂಡು ನಿಯಮದಂತೆ ಗ್ರಾಮಸಭೆ ನಡೆದಿಲ್ಲ ಎಂದು ಪಂಚಾಯತ್‌ರಾಜ್ ಇಲಾಖೆ ಆಯುಕ್ತರು, ಕಾರ್ಯದರ್ಶಿ, ಜಿಪಂ ಸಿಇಒ ಅವರಿಗೆ ಸುಳ್ಳು ಮಾಹಿತಿ ನೀಡಿ ದೂರು ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಪುತ್ರಿಯಿಂದ ಸಭೆಯ ವಿಡಿಯೋ
ಶಶಿಕಲಾ ಅವರು ಜೆ.ವೆಂಕಟಾಪುರ ಗ್ರಾಪಂನ ಬೈರಸಂದ್ರ ಕ್ಷೇತ್ರ ಸದಸ್ಯೆಯಾಗಿದ್ದು, ಬೆಂಗಳೂರಲ್ಲಿ ವಾಸವಿದ್ದಾರೆ. ಪಂಚಾಯಿತಿಯ ಯಾವುದೇ ಸಭೆಗೂ ಸರಿಯಾಗಿ ಬರುವುದಿಲ್ಲ. ಸಭೆಗಳಿಗೆ ಮಗಳನ್ನು ಕರೆದುಕೊಂಡು ಬಂದು ಶಶಿಕಲಾ ಆಕೆಯ ಕೈಗೆ ಮೊಬೈಲ್ ಕೊಟ್ಟು ವಿಡಿಯೋ ಮಾಡಲು ಹೇಳುತ್ತಾರೆ. ಆಕೆ ಬರುವುದಕ್ಕೂ ಮೊದಲೇ ಚರ್ಚೆಯಾದ ವಿಷಯಗಳನ್ನು ಮತ್ತೆ ಚರ್ಚೆ ಮಾಡುವಂತೆ ಒತ್ತಾಯಿಸುತ್ತಾರೆ. ನಾನು ಇಲ್ಲದಿರುವಾಗ ತೆಗೆದುಕೊಂಡ ತೀರ್ಮಾನಗಳಿಗೆ ಒಪ್ಪಿಗೆ ಇರುವುದಿಲ್ಲ. ಹಾಗಾಗಿ ಸಭೆ ಮುಂದೂಡಿ ಇಲ್ಲವೇ ಮೊದಲಿನಿಂದ ಆರಂಭಿಸಿ ಎಂದು ಹಠ ಹಿಡಿಯುತ್ತಾರೆ. ಬಹುತೇಕ ಎಲ್ಲ ಸಭೆಗಳಲ್ಲೂ ಇದು ಪುನರಾವರ್ತನೆ ಆಗುತ್ತಿದೆ ಎಂದು ನಾಗೇಶ್ ದೂರಿದರು.

ಬೇಸತ್ತ ಅಧಿಕಾರಿಗಳು
ಗ್ರಾಮದಲ್ಲಿ ನಡೆಯುವ ಎಲ್ಲ ಕೆಲಸ ಕಾರ್ಯಗಳಿಗೂ ಅವರ ಅನುಮತಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾರೆ. ಎಲ್ಲ ಕೆಲಸಗಳಲ್ಲೂ ಅವರನ್ನೇ ಮುಂದಿಟ್ಟುಕೊಂಡು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ನಾಗೇಶ್, ಶಶಿಕಲಾ ಅವರ ಕ್ಷೇತ್ರ ಬೈರಸಂದ್ರದಲ್ಲಿ ಕೆಲಸ ಮಾಡಲು ಬೇಸತ್ತಿರುವ ಅಧಿಕಾರಿಗಳು ಅಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದರಿಂದ ಬೈರಸಂದ್ರ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಆರೋಪಿಸಿದರು.

ಆಯುಕ್ತರಿಗೆ ದೂರು
ಪಂಚಾಯಿತಿ ವ್ಯಾಪ್ತಿಯ ಎಲ್ಲ ಕ್ಷೇತ್ರಗಳ ಗ್ರಾಮಗಳಲ್ಲೂ ನರೇಗಾ ಯೋಜನೆಯಡಿ ಲಕ್ಷಾಂತರ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ, ಬೈರಸಂದ್ರದಲ್ಲಿ ಮಾತ್ರ ನರೇಗಾದಡಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಅದಕ್ಕೆ ಶಶಿಕಲಾ ಅವರ ಅಸಹಕಾರ, ನಿರ್ಲಕ್ಷ್ಯವೇ ಕಾರಣ ಎಂದು ನಾಗೇಶ್ ಆಪಾದಿಸಿದರು. ಸಭೆಗಳಲ್ಲಿ ಅವರು ನಡೆದುಕೊಳ್ಳುವ ರೀತಿ, ವಿಡಿಯೋ ಮಾಡುವುದು, ಸಣ್ಣಪುಟ್ಟ ವಿಚಾರಕ್ಕೂ ಪ್ರತಿಭಟನೆ ಮಾಡುತ್ತೇನೆ, ಬೆದರಿಸುವುದು ಇವೆಲ್ಲವೂ ಸೇರಿ ಶಶಿಕಲಾ ವಿರುದ್ಧ ಪಂಚಾಯತ್ ರಾಜ್ ಇಲಾಖೆ ಆಯುಕ್ತರು, ಗ್ರಾಪಂ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷರಿಗೂ ದೂರು ನೀಡಲಾಗಿದೆ ಎಂದರು. ಗ್ರಾಪಂ ಸದಸ್ಯರಾದ ಟಿ.ನಾರಾಯಣಸ್ವಾಮಿ, ತಿರುಪಳ್ಳಪ್ಪ, ಮುಖಂಡರಾದ ಪಿ.ದೇವರಾಜ್, ಹರೀಶ್, ವೆಂಕಟೇಶ್, ಶಿವಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net