ಅಂಚೆ ಇಲಾಖೆ ರೀತಿ ಜಗತ್ತಿನ ಯಾವ ವಿತರಣಾ ವಲಯವೂ ಇಲ್ಲ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬಣ್ಣನೆ

Raghu_10_Gramin_Dak_Sevak_Sammelana_@_Town_Hall (1)
Published on

ಬೆಂಗಳೂರು: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಭರೂಚ್‌ನಿಂದ ತವಾಂಗ್‌ವರೆಗೆ 1.64 ಲಕ್ಷ ಅಂಚೆ ಕಚೇರಿಗಳನ್ನು ಹೊಂದಿರುವ ‘ಭಾರತೀಯ ಅಂಚೆ ಇಲಾಖೆ’ಯಷ್ಟು ಆಳ ಹಾಗೂ ಅಗಲವನ್ನು ಜಗತ್ತಿನ ಯಾವುದೇ ವಿತರಣಾ ವಲಯವು ಹೊಂದಿಲ್ಲ ಎಂದು ಕೇಂದ್ರ ಸಂವಹನ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹೇಳಿದ್ದಾರೆ.

ನಗರದ ಕೆ.ಪಿ. ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಗುರುವಾರ ನಡೆದ ‘ಗ್ರಾಮೀಣ ಡಾಕ್ ಸೇವಕರ ಸಮ್ಮೇಳನ’ದಲ್ಲಿ 2024-25ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ 15 ಗ್ರಾಮೀಣ ಡಾಕ್ ಸೇವಕ (ಜಿಡಿಎಸ್)ರನ್ನು ಸನ್ಮಾನಿಸಿ ಮಾತನಾಡಿದರು. ವಿಶ್ವದ ಅತಿದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆಯಾಗುವ ಸಾಮರ್ಥ್ಯವನ್ನು ಅಂಚೆ ಇಲಾಖೆ ಹೊಂದಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಂಚೆ ನೌಕರರನ್ನು ಪ್ರೇರೇಪಿಸಿದ ಸಚಿವರು, ಅಂಚೆ ಸಿಬ್ಬಂದಿ ಹೊರತುಪಡಿಸಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಯಾವುದೇ ವಲಯದಿಂದ ಸಾಧ್ಯವಿಲ್ಲ. ಹಾಗಾಗಿ ಲಭ್ಯವಿರುವ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸತನವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.

ಮಾಲ್ ಆಗಿ ಪರಿವರ್ತನೆ ಆಗಬೇಕು:

ಅಂಚೆ ಕಚೇರಿಗಳನ್ನು ನಗರದ ಮಾಲ್‌ಗಳಂತೆ ಪರಿವರ್ತಿಸುವ ಅಗತ್ಯವಿದೆ. ಪ್ರಸ್ತುತ ಅಂಚೆ ಹಾಗೂ ಬ್ಯಾಂಕಿಂಗ್‌ನಂತಹ ಸೇವೆಗಳನ್ನು ಮೀರಿ ಅಂಚೆ ಕಚೇರಿಗಳು ಬದಲಾಗಬೇಕು. ಗ್ರಾಮೀಣ ಭಾಗಗಳಲ್ಲೂ ನಗರದಂತೆ ಸೇವೆಗಳು ದೊರೆಯಬೇಕು. ಅದಕ್ಕಾಗಿ ಹಳ್ಳಿಗಳಲ್ಲಿನ ಅಂಚೆ ಕಚೇರಿಗಳು ಸಣ್ಣ ಸಣ್ಣ ಮಾಲ್‌ಗಳಾಗಿ ಪರಿವರ್ತನೆ ಆಗಬೇಕು. ಅಲ್ಲಿ ಎಲ್ಲ ರೀತಿಯ ಸೌಲಭ್ಯಗಳು ದೊರೆಯುವಂತಾಗಬೇಕು ಎಂದರು.

ಡಾಕ್ ಸೇವಕರು (ಪೋಸ್ಟ್ ಮ್ಯಾನ್/ಪೋಸ್ಟ್ ವುಮನ್) ಕೇವಲ ಅಂಚೆ ಪೂರೈಕೆದಾರರಲ್ಲ, ಜನರ ಪತ್ರಗಳು ಹಾಗೂ ಪಾರ್ಸೆಲ್‌ಗಳನ್ನಷ್ಟೇ ಕೊಂಡೊಯ್ಯುವುದಿಲ್ಲ. ಅವರ ಆಶಯಗಳನ್ನು, ನಿರೀಕ್ಷೆಗಳನ್ನೂ ಕೊಂಡೊಯ್ಯುತ್ತಾರೆ. ಅವರ ನೋವು ನಲಿವುಗಳಲ್ಲಿ ಬಾಗಿಯಾಗುತ್ತಾರೆ. ಹಾಗಾಗಿ ಡಾಕ್ ಸೇವಕರು ಪ್ರತಿ ಕುಟುಂಬದ ಸದಸ್ಯರಿದ್ದಂತೆ ಎಂದು ಅವರ ಸೇವೆಯನ್ನು ಶ್ಲಾಘಿಸಿದರು.

ಅಂಚೆ ಇಲಾಖೆ ದೇಶಾದ್ಯಂತ ಪ್ರತಿ ವರ್ಷ 200 ಕೋಟಿ ರೂ. ಮೌಲ್ಯದ ಪಾರ್ಸೆಲ್‌ಗಳನ್ನು ತಲುಪಿಸುತ್ತಿದ್ದು, ಅದರಲ್ಲಿ ಶೇ.30 ಕರ್ನಾಟಕದ ಪಾಲಿದೆ. ಇಲಾಖೆಯ ಕಾರ್ಯದರ್ಶಿ ವಂದಿತಾ ಕೌಲ್ ಅವರು ಕರ್ನಾಟಕ ವೃತ್ತವು ಆಟೋಮೇಟೆಡ್ ಪಾರ್ಸೆಲ್ ಟ್ರ್ಯಾಕರ್ (ಎಪಿಟಿ) 2.0 ಅನ್ನು ಅಳವಡಿಸಿಕೊಂಡಿದ್ದು, ಡಿಜಿಟಲ್ ನಾವೀನ್ಯತೆಯ ಪರಿಣಾಮಕಾರಿ ಅನುಷ್ಠಾನದೊಂದಿಗೆ ಪಾರ್ಸೆಲ್ ನೆಟ್‌ವರ್ಕ್ ಬಲಪಡಿಸುವಲ್ಲಿ ಮತ್ತು ನವೀನ ಅಂಚೆ ಚೇಟಿ ಸಂಗ್ರಹಕ್ಕೆ ಸಾರ್ವಜನಿಕರನ್ನು ತೊಡಗಿಸಿಕೊಳ್ಳುವಿಕೆಯಲ್ಲಿ ಕರ್ನಾಟಕ ವೃತ್ತದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಂಚೆ ಇಲಾಖೆ ಕಾರ್ಯದರ್ಶಿ ವಂದಿತಾ ಕೌಲ್, ಅಂಚೆ ಸೇವೆಗಳ ಮಂಡಳಿ ಸದಸ್ಯೆ ಮಂಜು ಕುಮಾರ್, ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್, ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು, ರಾಜ್ಯಾದ್ಯಂತದಿಂದ ಆಗಮಿಸಿದ್ದ 800ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕರು, ಅಂಚೆ ವಿತರಣಾ ಸಿಬ್ಬಂದಿ, ಶಾಖಾ ಪೋಸ್ಟ್ ಮಾಸ್ಟರ್‌ಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net