ಶಾಸಕರಿಗೆ ಗ್ರಾಪಂ ಸದಸ್ಯರ ದೂರುಗಳ ಸುರಿಮಳೆ

28M.D.R.2
Published on

ಮದ್ದೂರು: ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೆ ನಿರ್ಲಕ್ಷೃ ತೋರುತ್ತಿದ್ದಾರೆ. ಇದರಿಂದಾಗಿ ಸ್ಥಳೀಯರು ನಿತ್ಯ ಸಮಸ್ಯೆಯಿಂದ ಬಳಲುವಂತಾಗಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಶಾಸಕ ಕೆ.ಎಂ.ಉದಯ್ ಅವರಿಗೆ ಮನವಿ ಮಾಡಿದರು.


ತಾಲೂಕಿನ ಬೆಸಗರಹಳ್ಳಿ ಗ್ರಾಪಂ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯರು, ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ಪಣ್ಣೆದೊಡ್ಡಿ, ಬೆಸಗರಹಳ್ಳಿ, ಕೆರೆಮೇಗಳ ದೊಡ್ಡಿ, ಈರೇಗೌಡನ ದೊಡ್ಡಿ, ಚುಂಚೆಗೌಡನ ದೊಡ್ಡಿ ಮತ್ತು ಮಹರ್ನಮಿ ದೊಡ್ಡಿ ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯದೆ ಸಾರ್ವಜನಿಕರು ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸುವಂತಾಗಿದೆ. ಕೂಡಲೇ ನರೇಗಾ ಮತ್ತು ತಮ್ಮ ಅನುದಾನದಲ್ಲಿ ಕಾಮಗಾರಿ ಕೈಗೊಂಡು ಮಾದರಿ ಗ್ರಾಮಗಳನ್ನಾಗಿ ರೂಪಿಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದರು.
ಬೆಸಗರಹಳ್ಳಿ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ. ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದ್ದರೂ ಈವರೆಗೂ ಅಭಿವೃದ್ಧಿ ಮರೀಚಿಕೆಯಾಗಿದ್ದು ಎಲ್ಲೆಂದರಲ್ಲಿ ಕಸದ ರಾಶಿ, ಶೌಚಗೃಹ, ಚರಂಡಿ ನೀರು ಹರಿಯುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ವೈದ್ಯರಿಲ್ಲ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜಲಜೀವನ ಮಿಷನ್ ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಪರದಾಡುವಂತಾಗಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದರು.


ಬಳಿಕ ಮಾತನಾಡಿದ ಶಾಸಕ ಕೆ.ಎಂ.ಉದಯ್, ಬೆಸಗರಹಳ್ಳಿ ಗ್ರಾಪಂ ದೊಡ್ಡ ಪಂಚಾಯಿತಿಯಾಗಿದ್ದು ಸಮಸ್ಯೆಗಳನ್ನು ಬಗೆಹರಿಸಲು ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡಿ. ಸರ್ಕಾರದಿಂದ ವಿಶೇಷ ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಿದ್ದು ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವುದಾಗಿ ತಿಳಿಸಿದರು.


ಬೆಸಗರಹಳ್ಳಿ ಗ್ರಾಮದಲ್ಲಿ ಕೆಲವರು ಅನಧಿಕೃತವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡು ದುಪ್ಪಟ್ಟು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಅಂತಹ ಅಂಗಡಿಗಳನ್ನು ತೆರವು ಮಾಡುವಂತೆ ಸ್ಥಳದಲ್ಲಿದ್ದ ಪಿಡಿಒ ಅವರಿಗೆ ಸೂಚಿಸಿದರು. ಬೀದಿ ದೀಪದ ವ್ಯವಸ್ಥೆ, ಮಹಿಳಾ ವೈದ್ಯರ ನಿಯೋಜನೆ, ಬಸ್ ನಿಲ್ದಾಣ ಆಧುನೀಕರಣ, ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಸದಸ್ಯರಿಗೆ ಭರವಸೆ ನೀಡಿದರು.


ಗ್ರಾಪಂ ಅಧ್ಯಕ್ಷೆ ಕೆ.ಸಿ.ರಾಧಿಕಾ ಪ್ರಸಾದ್, ಉಪಾಧ್ಯಕ್ಷೆ ಶಾಯಿನತಾಜ್, ಸದಸ್ಯರಾದ ಬಾಬು ಕಾಳೇಗೌಡ, ಲೋಕೇಶ್, ಕಾವ್ಯಾ, ಸೌಮ್ಯಾ, ಜಾವಿದ್, ವೆಂಕಟೇಶ್, ಪ್ರಸನ್ನ ಕುಮಾರ್, ನಾಗರಾಜಮೂರ್ತಿ, ತಾಪಂ ಇಒ ರಾಮಲಿಂಗಯ್ಯ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್, ಪಿಡಿಒ ಬಾಲಾಜಿಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net