ಗ್ರಾಮಸ್ಥರಿಲ್ಲದೆ ಮುಂಡೂರು ಗ್ರಾಮಸಭೆ ಮುಂದೂಡಿಕೆ: ಕೋರಂ ಕೊರತೆ ವಿಚಾರದಲ್ಲಿ ಆಕ್ಷೇಪ, ಗದ್ದಲ

Published on

ಪುತ್ತೂರು ಗ್ರಾಮಾಂತರ: ಗ್ರಾಮಸ್ಥರ ಸಂಖ್ಯೆ ಕಡಿಮೆ ಇರುವುದರಿಂದ ಕೋರಂ ಕೊರತೆಯ ಹಿನ್ನೆಲೆಯಲ್ಲಿ ಗ್ರಾಮಸಭೆಯನ್ನು ಮುಂದೂಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ, ಈ ವಿಚಾರದಲ್ಲಿ ಒಂದೂವರೆ ಗಂಟೆ ಆಕ್ರೋಶಯುತ ವಾಗ್ವಾದ- ಗದ್ದಲದ ಚರ್ಚೆ ನಡೆದು ಕೊನೆಗೆ ಗ್ರಾಮಸಭೆಯನ್ನು ಮುಂದೂಡಿದ ವಿದ್ಯಮಾನ ಸೋಮವಾರ ಮುಂಡೂರು ಗ್ರಾಮಸಭೆಯಲ್ಲಿ ನಡೆದಿದೆ.

ಮುಂಡೂರು ಗ್ರಾಮಸಭೆ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ್ ಎನ್.ಎಸ್.ಡಿ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತ್ತು. ಪುತ್ತೂರು ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವನಿತಾ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು. ಸಭೆಯಲ್ಲಿ ಇಲಾಖಾಧಿಕಾರಿಗಳು ಮಾಹಿತಿ ನೀಡಲು ಆರಂಭಿಸಿದ ಬೆನ್ನಲ್ಲೇ ಗ್ರಾಮಸ್ಥ ಸುಪ್ರೀತ್ ಕಣ್ಣಾರಾಯ ಗ್ರಾಮಸ್ಥರ ಸಂಖ್ಯೆ ಕಡಿಮೆ ಇದ್ದು, ಕೋರಂ ಕೊರತೆ ಇರುವುದರಿಂದ ಸಭೆ ಮುಂದೂಡುವಂತೆ ಆಗ್ರಹಿಸಿದರು.

ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಗ್ರಾಮಸಭೆಯ ಬಗ್ಗೆ ಪ್ರಚಾರ ಮಾಡಲಾಗಿದೆ. ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಜನ ಬಾರದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಈ ವೇಳೆ ಕಾಟಾಚಾರದ ಗ್ರಾಮಸಭೆ ಬೇಡ ಎಂದು ಪ್ರವೀಣ್ ಆಚಾರ್ಯ ಮತ್ತು ಗಣೇಶ್ ಕೊರಂಗು, ಕಾನೂನು ಬಾಹಿರವಾಗಿ ಸಭೆ ನಡೆಸಲು ನಾವು ಅವಕಾಶ ನೀಡುವುದಿಲ್ಲ ಎಂದು ಸುಪ್ರೀತ್ ಕಣ್ಣಾರಾಯ ಹೇಳಿದರು. ಅರ್ಧ ಸಭೆ ಮುಗಿದ ಮೇಲೆ ನೀವು ಮಾಡುತ್ತಿರುವುದು ಉದ್ದೇಶಪೂರ್ವಕ ಚರ್ಚೆಯಾಗಿದ್ದು, ಸಭೆ ಮುಂದುವರಿಯುತ್ತದೆ ಎಂದು ಅಧ್ಯಕ್ಷ ಚಂದ್ರಶೇಖರ್ ಹೇಳಿದರು.

ಗ್ರಾ.ಪಂ.ಸದಸ್ಯ ಕರುಣಾಕರ ಎಲಿಯ ಗ್ರಾಮಸ್ಥರ ಸಂಖ್ಯೆ ಕಡಿಮೆ ಇರುವುದು ನಿಜ. ಈಗ ಗ್ರಾಮಸಭೆ ಆರಂಭಗೊಂಡಿರುವುದರಿಂದ ಮುಂದುವರಿಸುವ. ಮುಂದೆ ಈ ರೀತಿ ಆದರೆ ಗ್ರಾಮಸಭೆ ರದ್ದುಪಡಿಸುವ ಎಂದರು. ಪಿಡಿಒ ಮನ್ಮಥ ಸಭೆ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು. ಆದರೆ ಸಭೆ ಮುಂದುವರಿಸಲು ಕಮಲೇಶ್, ಮಹಮ್ಮದ್ ಆಲಿ, ಸುಪ್ರೀತ್ ಕಣ್ಣಾರಾಯ, ಗಣೇಶ್ ಕೊರಂಗು, ಮಹಾಲಿಂಗ ನಾಯ್ಕ ಆಕ್ಷೇಪಿಸಿದರು. ಮಾಹಿತಿ ನೀಡಲು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ನಮಿತಾ ನಾಯ್ಕ ವೇದಿಕೆಗೆ ಬಂದಾಗಲೂ ಆಕ್ಷೇಪ ವ್ಯಕ್ತವಾಯಿತು. ಇದರಿಂದಾಗಿ ಅವರು ಮಾಹಿತಿ ನೀಡದೆ ವೇದಿಕೆಯಿಂದ ಕೆಳಗಿಳಿದರು.

ವಾಗ್ವಾದ, ಗದ್ದಲ, ಚರ್ಚೆ ಮುಂದುವರಿಯುತ್ತಿದ್ದಂತೆಯೇ ಚರ್ಚಾ ನಿಯಂತ್ರಣಾಧಿಕಾರಿ ವನಿತಾ ಕೋರಂ ಕೊರತೆಯ ಕಾರಣ ಗ್ರಾಮಸಭೆಯನ್ನು ಮುಂದೂಡುವುದಾಗಿ ಘೋಷಿಸಿದರು. ಗ್ರಾ.ಪಂ.ಉಪಾಧ್ಯಕ್ಷೆ ಸುನಂದಾ ಬೊಳ್ಳಗುಡ್ಡೆ, ಸದಸ್ಯ ಉಮೇಶ್ ಗೌಡ ಅಂಬಟ, ಕಾರ್ಯದರ್ಶಿ ಸೂರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net