ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿಯಿಂದ ಮಹತ್ತರ ಕೊಡುಗೆ: ಡಾ.ಎಂ.ಮೋಹನ್ ಆಳ್ವ ಅಭಿಪ್ರಾಯ

New Project (27)
Published on

ಉಳ್ಳಾಲ: ಸ್ವಾತಂತ್ರೃಪೂರ್ವದಲ್ಲಿ ಶೇ.12ರಷ್ಟು ವಿದ್ಯಾವಂತರಿದ್ದರೆ ಪ್ರಸ್ತುತ ದಿನಗಳಲ್ಲಿ ಸರಾಸರಿ ಶೇ.78ರಷ್ಟು ವಿದ್ಯಾವಂತರಿದ್ದು ಇದರ ಹಿಂದೆ ಖಾಸಗಿ ವಿದ್ಯಾಸಂಸ್ಥೆಗಳ ಕೊಡುಗೆ ಮಹತ್ತರ ಪಾತ್ರ ವಹಿಸುತ್ತದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅಭಿಪ್ರಾಯಪಟ್ಟರು.

ಕೊಣಾಜೆ ಸಮೀಪದ ನಡುಪದವು ಪಿ.ಎ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಮಾನವ ಸಂಪನ್ಮೂಲ ಹೊಂದಿರುವ ಭಾರತದಲ್ಲಿಂದು 52 ಕೋಟಿಗೂ ಅಧಿಕ 25 ವರ್ಷದೊಳಗಿನ ವಿದ್ಯಾರ್ಥಿಗಳಿದ್ದಾರೆ. ಈ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಯಲ್ಲಿ ಯುವ ಸಮುದಾಯದ ಜವಾಬ್ದಾರಿ ಮಹತ್ವದ್ದು ಎಂದರು.

ಪಿ.ಎ. ಎಜುಕೇಶನಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಕ್ಯಾಲಿಕಟ್ ಹಾಗೂ ಕಣ್ಣೂರು ವಿವಿಯ ವಿಶ್ರಾಂತ ಕುಲಪತಿ ಡಾ.ಅಬ್ದುಲ್ ರಹಿಮಾನ್, ಪಿ.ಎ. ಎಜುಕೇಶನ್ ಟ್ರಸ್ಟ್‌ನ ಹಣಕಾಸು ನಿರ್ದೇಶಕ ಕೆ.ಅಹಮ್ಮದ್ ಕುಟ್ಟಿ, ಕಾಲೇಜಿನ ಎಜಿಎಂ ಸರ್ಫುದ್ದೀನ್, ಡೀನ್ ಸಯ್ಯದ್ ಅಮೀನ್ ಅಹ್ಮದ್, ಹಾರೀಸ್ ಟಿ.ಡಿ. ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಉಪಪ್ರಾಂಶುಪಾಲ ಪ್ರೊ.ಇಸ್ಮಾಯಿಲ್ ಖಾನ್ ಪದವಿ ಪ್ರಮಾಣ ಬೋಧಿಸಿದರು. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೆ.ಸೂಫಿ ಸ್ವಾಗತಿಸಿದರು. ಪ್ರೊ.ಅಜಿತ್ ಕುಮಾರ್ ವಾಸು ವಂದಿಸಿದರು. ತೇಜಸ್ವಿನಿ ಮಾರ್ಥ ಹಾಗೂ ರಂಜಿತಾ ಡಿ. ಅತಿಥಿಗಳನ್ನು ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net