ಪ್ಲಾಸ್ಟಿಕ್​ ಬಿಡಿ ಬಟ್ಟೆ ಬ್ಯಾಗ್​ ಹಿಡಿ

bag
Published on

ರಾಮನಗರ: ಪ್ಲಾಸ್ಟಿಕ್​ ಕವರ್​ಗಳ ಬಳಕೆ ಕಡಿವಾಣ ಹಾಕುವ ಮೂಲಕ ಸ್ವಚ್ಛ ರಾಮನಗರ ಕನಸು ಕಂಡಿರುವ ನಗರಸಭೆ, ಮನೆ ಮನೆಗೆ ಬಟ್ಟೆ ಬ್ಯಾಗ್​ ವಿತರಿಸಿ ಜನರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ.

ಹಲವಾರು ಪ್ರಯತ್ನಗಳ ಹೊರತಾಗಿಯೂ ಪ್ಲಾಸ್ಟಿಕ್​ ಬಳಕೆಗೆ ಕಡಿವಾಣ ಬಿದ್ದಿಲ್ಲ, ಈ ಹಿನ್ನೆಲೆಯಲ್ಲಿ ಬಟ್ಟೆ ಬ್ಯಾಗ್​ ವಿತರಿಸಿ ಜಾಗೃತಿ ಮೂಡಿಸಿದರೆ ಇದಕ್ಕೆ ಅಂತ್ಯವಾಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಟ್ಟೆ ಬ್ಯಾಗ್​ ನೀಡಲು ನಗರಸಭೆ ಮುಂದಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 25 ಸಾವಿರ ಮನೆಗಳಿದ್ದು, ಪ್ರಥಮ ಹಂತದಲ್ಲಿ 15 ಸಾವಿರ ಮನೆಗಳಿಗೆ, ಎರಡನೇ ಹಂತದಲ್ಲಿ 10 ಸಾವಿರ ಮನೆಗಳಿಗೆ ಬ್ಯಾಗ್​ ವಿತರಣೆ ಗುರಿ ಹೊಂದಲಾಗಿದೆ.

ಮರುಬಳಕೆ ಸಾಧ್ಯ ಬಟ್ಟೆ ಬ್ಯಾಗ್​ ಮರುಬಳಕೆ ಮತ್ತು ಪ್ರಕೃತಿಯಲ್ಲಿ ಕರಗುವುದರಿಂದ ಇದರ ಬಗ್ಗೆ ಮಹಿಳೆಯರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸುವುದರ ಜತೆಗೆ ಪ್ಲಾಸ್ಟಿಕ್​ ಬಳಕೆಯಿಂದ ಏನೆಲ್ಲಾ ತೊಂದರೆಗಳು ಆಗುತ್ತವೆ ಎನ್ನುವ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕಾಗಿ 3 ವರ್ಷಗಳ ಅವಧಿಗೆ ಸ್ವಯಂ ಸೇವಾ ಸಮುದಾಯದ 16 ಮಹಿಳಾ ಕಾರ್ಯಕರ್ತರನ್ನು ನಗರಸಭೆ ನೇಮಕ ಮಾಡಿಕೊಂಡು, ಯಾರೂ ಪ್ಲಾಸ್ಟಿಕ್​ ಬಳಕೆಗೆ ಮುಖ ಮಾಡದಂತೆ ಬಟ್ಟೆ ಬ್ಯಾಗ್​ಗಳ ಉಪಯೋಗಗಳ ಬಗ್ಗೆ ಸಂಪೂರ್ಣ ಮಾತಿಯುಳ್ಳ ಕರಪತ್ರದ ಮೂಲಕ ತಿಳಿಹೇಳುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ ಪರಿಸರ ಇಂಜಿನಿಯರ್​ ಸುಬ್ರಹ್ಮಣಿ.

ದಾಳಿ, ದಂಡ ವಸೂಲಿ ಪ್ಲಾಸ್ಟಿಕ್​ ಬಳಕೆ ನಿಷೇಧದ ಹೊರತಾಗಿಯೂ ಚಾಲ್ತಿಯಲ್ಲಿದ್ದ ಪ್ಲಾಸ್ಟಿಕ್​ಅನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಸುಮಾರು 2 ಸಾವಿರ ಕೆ.ಜಿ. ಏಕಬಳಕೆ ಪ್ಲಾಸ್ಟಿಕ್​ ವಶಪಡಿಸಿಕೊಂಡು 2.62 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ನಗರಸಭೆ ಆರೋಗ್ಯ ಅಧಿಕಾರಿ ವಿಜಯಕುಮಾರ್​ ಮಾಹಿತಿ ನೀಡಿದ್ದಾರೆ. ಜತೆಗೆ ಒಂದು ಕೆ.ಜಿ.ಗಿಂತ ಕಡಿಮೆ ಪ್ಲಾಸ್ಟಿಕ್​ ದಾಸ್ತಾನು ಮಾಡಿದವರಿಗೆ 500, 10 ಕೆ.ಜಿ.ವರೆಗೆ 2 ಸಾವಿರ ರೂ., 50&100 ಕೆಜಿವರೆಗೆ 10 ಸಾವಿರ ರೂ., 100 ಕೆಜಿ ಮೇಲ್ಪಟ್ಟ ಪ್ಲಾಸ್ಟಿಕ್​ ದಾಸ್ತಾನಿಗೆ 40 ಸಾವಿರ ರೂ., ದಂಡ ವಿಧಿಸಲು ನಗರಸಭೆ ಮುಂದಾಗಿದೆ. ಇದರೊಂದಿಗೆ ಕಳೆದ 3 ತಿಂಗಳಿಂದ ರಾಮನಗರದಲ್ಲಿ ಉತ್ಪತ್ತಿಯಾದ 17 ಟನ್​ ಪ್ಲಾಸ್ಟಿಕ್​ ತ್ಯಾಜ್ಯವನ್ನು ಬಿಡದಿಯ ಕರ್ನಾಟಕ ಪವರ್​ ಕಾರ್ಪೋರೇಷನ್​ಗೆ ಕಳುಸಿದೆ.

ಪ್ಲಾಸ್ಟಿಕ್​ನಿಂದಾಗಿ ರಾಮನಗರದ ಸ್ವಚ್ಛ, ಸುಂದರ ಪರಿಸರ ಹಾಳಾಗುತ್ತಿದೆ. ಪ್ಲಾಸ್ಟಿಕ್​ ಬಳಕೆ ನಿಷೇಧವಾದರೆ ನಗರಸಭೆಗೆ ಅರ್ಧ ಭಾಗ ತ್ಯಾಜ್ಯ ವಿಲೇವಾರಿ ತಪ್ಪುತ್ತದೆ. ಕುಟುಂಬದ ಉಸ್ತುವಾರಿವಹಿಸಿರುವ ಮಹಿಳೆಯರಿಗೆ ಈ ವಿಚಾರದಲ್ಲಿ ಜಾಗೃತಿ ಮೂಡಿದರೆ ಪ್ಲಾಸ್ಟಿಕ್​ ಬಳಕೆಗೆ ಕಡಿವಾಣ ಬೀಳುತ್ತದೆ. ಅದಕ್ಕಾಗಿ ಮನೆಮನೆಗೆ ಬಟ್ಟೆ ಬ್ಯಾಗ್​ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ. > ಕೆ.ಶೇಷಾದ್ರಿ ಅಧ್ಯಕ್ಷರು, ನಗರಸಭೆ, ರಾಮನಗರ ಸರ್ಕಾರ ಪ್ಲಾಸ್ಟಿಕ್​ ಬಳಕೆ ನಿಷೇಧ. ಪ್ಲಾಸ್ಟಿಕ್​ನಿಂದ ಕಸ ಜಾಸ್ತಿಯಾಗುತ್ತದೆ. ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಈ ನಿಟ್ಟಿನ್ಲಲಿ ಪ್ಲಾಸ್ಟಿಕ್​ ಬಳಕೆಗೆ ಕಡಿವಾಣ ಹಾಕಬೇಕು. ಜನರಲ್ಲಿ ಬಟ್ಟೆ ಬ್ಯಾಗ್​ ಬಳಕೆಗೆ ಉತ್ತೇಜನ ನೀಡಬೇಕು ಎನ್ನುವ ನಿಟ್ಟಿನಲ್ಲಿ ಮನೆ ಮನೆಗೆ ಬಟ್ಟೆ ಬ್ಯಾಗ್​ ವಿತರಣೆಗೆ ಮುಂದಾಗಿದ್ದೇವೆ. > ಡಾ.ಜಯಣ್ಣ ಆಯುಕ್ತರು, ನಗರಸಭೆ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net