

ಕೆ.ಆರ್.ಪ್ರಸಿನ್ ಹಾಸನ
ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಕಸ ಸಂಗ್ರಹ ಮಾಡುವ ಆಟೋಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಮೇಲ್ವಿಚಾರಣೆ ಮಾಡಲು ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ.
ನಗರದ 35 ವಾರ್ಡ್‌ಗಳು ಹಾಗೂ ಇತ್ತೀಚೆಗೆ ಪಾಲಿಕೆಗೆ ಸೇರ್ಪಡೆಯಾಗಿರುವ 37 ಹಳ್ಳಿಗಳಲ್ಲಿ ಕಸ ಸಂಗ್ರಹ ಜವಾಬ್ದಾರಿಯನ್ನು ಪಾಲಿಕೆ ಮಾಡುತ್ತಿದೆ. ಅದಕ್ಕಾಗಿ 52 ಆಟೋ ಹಾಗೂ 2 ಟಿಪ್ಪರ್‌ಗಳನ್ನು ನಿಯೋಜಿಸಲಾಗಿದೆ. ಪ್ರತಿ ಆಟೋ ದಿನಕ್ಕೆ 3 ಟ್ರಿಪ್ ಕಸ ಸಂಗ್ರಹಿಸಬೇಕಿದೆ. ಅಂದರೆ ಒಂದು ವಾರ್ಡ್‌ಗೆ ಮೂರು ಬಾರಿ ಭೇಟಿ ನೀಡಬೇಕೆಂಬ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಆದರೆ ಬಹುತೇಕ ಆಟೋ ಚಾಲಕರು ಕೇವಲ ಒಂದು ಟ್ರಿಪ್ ಕಸ ಸಂಗ್ರಹಿಸಿ ನಂತರ ವಾಹನ ನಿಲ್ಲಿಸಿ ಬಿಡುತ್ತಿದ್ದರು. ಈ ಬಗ್ಗೆ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರಿಂದ ದೂರು ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಪಾಲಿಕೆ ಎಲ್ಲ ಆಟೋಗಳಿಗೆ ಜಿಪಿಎಸ್ ಅಳವಡಿಸಿದ್ದು ವಾಹನ ಎಲ್ಲಿದೆ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾಗಿದೆ. ಜಿಪಿಎಸ್ ಅಳವಡಿಕೆ ಬಳಿಕ ಚಾಲಕರ ಆಟಾಟೋಪಕ್ಕೆ ಕಡಿವಾಣ ಬಿದ್ದಂತಾಗಿದೆ. ಜತೆಗೆ ಸಂತೆಪೇಟೆಯ ತ್ಯಾಜ್ಯ ಸಂಗ್ರಹ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು, ಸಮಯ ವ್ಯರ್ಥ ಮಾಡುವ ಸಿಬ್ಬಂದಿ ಮೇಲೆ ಪಾಲಿಕೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಸಂತೆಪೇಟೆಯಿಂದ ಅಗಿಲೆ ನೆಲಭರ್ತಿ ಘಟಕಕ್ಕೆ ತ್ಯಾಜ್ಯ ಹೊತ್ತೊಯ್ಯುವ ಟಿಪ್ಪರ್‌ಗಳಿಗೂ ಜಿಪಿಎಸ್ ಹಾಕಲಾಗಿದ್ದು ಸಂಚಾರದಲ್ಲಿ ವಿಳಂಬವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಎಷ್ಟೇ ಬಿಗಿ ಮಾಡಿದರೂ ಮುಗಿಯದ ಗೋಳು
ನಗರದಲ್ಲಿ ಸ್ವಚ್ಛತೆ ಕಾಪಾಡಬೇಕೆಂಬ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಎಷ್ಟೇ ಬಿಗಿ ನಿಯಮ ಕೈಗೊಂಡರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ರಸ್ತೆಯ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ತೆರವು ಮಾಡುವ ಕಾರ್ಯ ಅಪರೂಪವಾಗಿದೆ. ಕೆಲವು ವಾರ್ಡ್‌ಗಳಲ್ಲಿ ಕಸ ಸಂಗ್ರಹ ಆಟೋಗಳು ಬೆಳಗ್ಗೆ 10 ಗಂಟೆ ಬಳಿಕ ಬರುವುದರಿಂದ ಸಾರ್ವಜನಿಕರು ಕಸ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ರಸ್ತೆ ಬದಿ ಕಸ ಸುರಿಯುವ ರೂಢಿ ಬೆಳೆಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಕಸ ಸುರಿಯುವವರಿಗೆ ದಂಡ ವಿಧಿಸುವ ಅವಕಾಶ ಇದೆಯಾದರೂ ಅಧಿಕಾರಿಗಳು ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ನಗರದ ಎಲ್ಲ ಕಡೆ ಅನೈರ್ಮಲ್ಯ ತಾಂಡವವಾಡುತ್ತಿದ್ದು ಬೀದಿ ಬದಿ ನಾಯಿಗಳ ಹಾವಳಿ ಹೆಚ್ಚಾಗಿರುವುದು ಮಾತ್ರವಲ್ಲದೆ ದುರ್ವಾಸನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಗರಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ನಗರದ 80 ಅಡಿ ರಸ್ತೆ, ಉತ್ತರ ಬಡಾವಣೆ, ಪೆನ್ಷನ್ ಮೊಹಲ್ಲಾ, ಚಿಪ್ಪಿನಕಟ್ಟೆ, ಸಿದ್ದಯ್ಯನಗರ, ಹೇಮಾವತಿ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಕಸದ ರಾಶಿ ಮಿತಿ ಮೀರಿದ್ದು ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಹೇಳತೀರದಾಗಿದೆ.
ಕಾರ್ಮಿಕರಿಗಿಲ್ಲ ಸುರಕ್ಷತಾ ಪರಿಕರ
ಕಸ ಸಂಗ್ರಹ ಹಾಗೂ ವಿಲೇವಾರಿ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರಿಗೆ ಸುರಕ್ಷತಾ ಪರಿಕರಗಳೇ ಇಲ್ಲದಾಗಿದೆ. ಕಸ ಸಂಗ್ರಹಕ್ಕೆ ಆಟೋದಲ್ಲಿ ಬರುವ ಕಾರ್ಮಿಕರು ಮಾಸ್ಕ್, ಶೂ, ಕೈಗವಸು ಧರಿಸದೆ ತ್ಯಾಜ್ಯ ಶೇಖರಿಸುತ್ತಾರೆ. ಇನ್ನು ಸಂತೆಪೇಟೆಯಲ್ಲಿ ತ್ಯಾಜ್ಯ ಬೇರ್ಪಡಿಸುವ ಸಿಬ್ಬಂದಿ ಪರಿಸ್ಥಿತಿಯೂ ಹೇಳತೀರದಾಗಿದೆ. ಸಾಕಷ್ಟು ಕ್ಲಿಷ್ಟಕರ ಸನ್ನಿವೇಶದಲ್ಲಿ ಅಲ್ಲಿನ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅಗತ್ಯ ಪರಿಕರಗಳನ್ನು ನೀಡುವತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.
54 ಆಟೋಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಇದರಿಂದ ಸಿಬ್ಬಂದಿ ಶಿಸ್ತಿನಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪಾಲಿಕೆಯ ಹೆಲ್ತ್ ಇನ್‌ಸ್ಪೆಕ್ಟರ್ ಈ ಸಂಬಂಧ ಪರಿಶೀಲನೆ ನಡೆಸುತ್ತಾರೆ.
ಕಮಲ್ ಕುಮಾರ್ ಪಾಲಿಕೆ ಸದಸ್ಯ
ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ 54 ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಇದರಿಂದ ವಾಹನಗಳು ಎಲ್ಲೆಲ್ಲಿ ಸಂಚರಿಸುತ್ತವೆ ಎಂಬುದನ್ನು ಗಮನಿಸಬಹುದು. ಇದರಿಂದ ನಗರದ ಸ್ವಚ್ಛತೆ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.
ಕೃಷ್ಣಮೂರ್ತಿ ಆಯುಕ್ತ, ಹಾಸನ ಮಹಾನಗರಪಾಲಿಕೆ