ಕಲ್ಕುಣಿ ಗ್ರಾಪಂಗೆ ಜಿಪಂ ಸಿಇಒ ಭೇಟಿ

13 mlv 2
Published on

ಮಳವಳ್ಳಿ: ತಾಲೂಕಿನ ಕಲ್ಕುಣಿ ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಭೇಟಿ ನೀಡಿ ಕಚೇರಿ ಕಾರ್ಯಕ್ಷಮತೆ ಕುರಿತು ಪರಿಶೀಲನೆ ನಡೆಸಿದರು.


ಗ್ರಾಮ ಪಂಚಾಯಿತಿ ಕಡತಗಳ ಪರಿಶೀಲನೆ ನಡೆಸಿದ ನಂತರ ಗ್ರಾಪಂನ ಒಟ್ಟು ತೆರಿಗೆ ಸಂಗ್ರಹ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬೇಕಿರುವ ಬೇಡಿಕೆ ಸೇರಿದಂತೆ ಕಂದಾಯ ವಸೂಲಾತಿ ಬಗ್ಗೆ ಪಿಡಿಒ ಸೆಂದಿಲ್ ಅವರಿಂದ ವರದಿ ಪಡೆದುಕೊಂಡರು.


ನಂತರ ಗ್ರಾಮದಲ್ಲಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಒಗ್ಗೂಡುವಿಕೆಯಲ್ಲಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರದ ಕಟ್ಟಡವನ್ನು ವೀಕ್ಷಿಸಿದರು.


ನಂತರ ಕಿರುಗಾವಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಿಕೆಂಪನದೊಡ್ಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸುತ್ತಿರುವ ಸಂಜೀವಿನಿ ಶೆಡ್ ಕಾಮಗಾರಿಗೆ ಭೇಟಿ ನೀಡಿ ಪರಿಶೀಲಿಸಿದರು.


ಇದೇ ವೇಳೆ ಕಿರುಗಾವಲು, ಹಿಟ್ಟನಹಳ್ಳಿ, ಮಿಕ್ಕೆರೆ, ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಘನತ್ಯಾಜ್ಯ ನಿರ್ವಹಣ ಘಟಕ ನಿರ್ಮಾಣ ಮಾಡಲು ಕಂದಾಯ ಇಲಾಖೆಯಿಂದ ನೀಡಲಾಗಿರುವ ಸ್ಥಳಗಳಿಗೆ ಭೇಟಿ ನೀಡಿ, ಸ್ಥಳ ಮಂಜೂರಾತಿ ಕುರಿತು ಇರುವ ಗೊಂದಲಗಳನ್ನು ತಹಸೀಲ್ದಾರ್ ಅವರೊಡನೆ ಚರ್ಚಿಸಿ ಪರಿಹರಿಸಿಕೊಳ್ಳುವಂತೆ ಜತೆಯಲ್ಲಿದ್ದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಮತಾ ಅವರಿಗೆ ನಿರ್ದೇಶನ ನೀಡಿದರು.


ಹಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಟ್ಟನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ದ್ರವ ತ್ಯಾಜ್ಯ ಘಟಕದ ಕಾಮಗಾರಿ ಹಾಗೂ ನಿರ್ಮಾಣ ಹಂತದಲ್ಲಿರುವ ದೇವರ ಕೊಳ ಕಾಮಗಾರಿಗಳನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net