

ಕೈಲಾಂಚ : ಹೋಬಳಿಯ ಹುಣಸನಹಳ್ಳಿ ಗ್ರಾಪಂನ ಮಕ್ಕಳ ಗ್ರಾಮಸಭೆ ಕೂನಗಲ್ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ನಡೆಯಿತು.
ಮಕ್ಕಳು ಗ್ರಾಮಸಭೆಯನ್ನು ವೇದಿಕೆಯಾಗಿ ಉಪಯೋಗಿಸಿಕೊಂಡು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಬಿಚ್ಚಿಟ್ಟರು. ಕಳೆದ ವರ್ಷದ ಮಳೆಗೆ ಶಾಲೆಯ ಅಡುಗೆ ಮನೆ ಕೊಚ್ಚಿಹೋಗಿದೆ. ಹೊಸ ಕಟ್ಟಡ ಮಾಡಿಕೊಡಿ ಎಂದು ಜವಳಗೆರೆದೊಡ್ಡಿ ಶಾಲೆಯ 4ನೇತರಗತಿ ವಿದ್ಯಾರ್ಥಿನಿ ತನುಶ್ರೀ ಕೇಳಿದರು.
ಅಲ್ಲದೇ, ಶಾಲಾ ಕಟ್ಟಡಗಳು ಹಳೆಯದಾಗಿವೆ ಮಳೆಗೆ ನೀರು ಸೋರುತ್ತದೆ. ಓದಲು ತೊಂದರೆಯಾಗುತ್ತಿದೆ. ಹೊಸ ಕಟ್ಟಡ ಮತ್ತು ಹಳೆ ಕಟ್ಟಡಗಳ ರಿಪೇರಿ ಮಾಡಿಸಿಕೊಡಿ ಎಂದು ಕೆಪಿ ದೊಡ್ಡಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಿಂಚನ ಸಮಸ್ಯೆ ಹೇಳಿಕೊಂಡಿತು.
ತಮ್ಮನಾಯ್ಕನಹಳ್ಳಿ 5ನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಮಾತನಾಡಿ ಶಾಲೆ ಗಳ ಗೋಡೆಗಳು ಶಿಥಿಲವಾಗಿವೆ. ಶೌಚಗೃಹ ಬಾಗಿಲು ಹಾಕಿಸಿಕೊಡಿ, ಶಾಲೆಯಲ್ಲಿ ಕೋತಿಕಾಟ, ಪ್ರಯೋಗಾಲಯ ಕೊಠಡಿ ಬೇಕು, ಶಾಲಾ ಆಟದ ಮೈದಾನಕ್ಕೆ ನೀರು ತುಂಬುತ್ತದೆ. ಹಾಗೂ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಿಸಿಕೊಡಿ ಎಂಬಿತ್ಯಾದಿ ಸಮಸ್ಯೆಗಳನ್ನು ಶಾಲಾ ಮಕ್ಕಳು ಎಳೆಎಳೆಯಾಗಿ ಬಿಚ್ಚಿಟ್ಟರು.
ಸಭೆಯಲ್ಲಿ ಸಮಸ್ಯೆ ತಿಳಿದ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಗ್ರಾಪಂ ಮಟ್ಟದಲ್ಲಿ ಆಗುವ ಕೆಲವು ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿ ಹೊಸ ಕಟ್ಟಡ, ಮತ್ತಿತರ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆ ಜತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಗ್ರಾಪಂ ಪಿಡಿಒ ಬಿ.ಕೆ. ಕುಮಾರ್ ವಿದ್ಯಾರ್ಥಿಗಳಿಂದ ಕೇಳಿಬಂದ ಸಮಸ್ಯೆಗಳ ಪಟ್ಟಿ ಮಾಡಿದರು.
ಮಕ್ಕಳ ಹಕ್ಕು, ಬಾಲ್ಯವಿವಾಹ ಆರೋಗ್ಯ ಮಕ್ಕಳ ಗ್ರಾಮಸಭೆಯ ಮಹತ್ವವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾನೂನು ಪರಿವೀಕ್ಷಣಾಧಿಕಾರಿಯಶೋಧ ಸಭೆಯಲ್ಲಿ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಾದ ಸಿಂಚನ, ಚೇತನ್, ತೇಜಶ್ರೀ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಕಿರಣ್, ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ, ಸದಸ್ಯರಾದ ಸರೋಜಮ್ಮ, ಸುನೀತಾಬಾಯಿ, ಗೋಪಾಲ್, ಭಾರತಿ, ಸಿಎಂಸಿಎ ಸಂಸ್ಥೆ ಶಿಲ್ಪ, ಶ್ರೀನಿವಾಸ್, ಬಿಲ್‌ಕಲೆಕ್ಟರ್ ರಾಜೇಶ್, ಆರೋಗ್ಯ ಇಲಾಖೆ ಶಿವರಾಂ ಗ್ರಾಪಂ ವ್ಯಾಪ್ತಿಯ ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.
ಮೇಷ್ಟ್ರಾದ ಗ್ರಾಪಂ ಅಧ್ಯಕ್ಷ: ಸಭೆಯಲ್ಲಿ ತಮ್ಮನಾಯಕನಹಳ್ಳಿ ಶಾಲಾ ವಿದ್ಯಾರ್ಥಿನಿ ಶಾಲಾ ಆಟದ ಮೈದಾನದಲ್ಲಿ ಗಿಡಗಂಟಿ ಬೆಳೆದಿದ್ದು, ಸ್ವಚ್ಛತೆ ಮಾಡಿಸಿಕೊಡಿ ಎಂದು ಪ್ರಶ್ನೆಯನ್ನು ಸಭೆಯ ಗಮನಕ್ಕೆ ತಂದಾಗ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ ಮಧ್ಯೆ ಪ್ರವೇಶಿಸಿ ನಿಮ್ಮ ಶಾಲೆಗೆ ರಾಜ್ಯದಲ್ಲೇ ಹೈಟೆಕ್ ಆಗಿ ಗ್ರಾಪಂ ನರೇಗಾ ಯೋಜನೆ ಮುಖಾಂತರ ನಿಮ್ಮ ಉಪಯೋಗಕ್ಕೆ ಆಟದ ಮೈದಾನಗಳನ್ನು ಮಾಡಲಾಗಿದೆ. ನೀವು ಮೈದಾನದಲ್ಲಿ ಪ್ರತಿನಿತ್ಯ ಆಟವಾಡಿ ಕ್ರೀಡಾಂಗಣ ಬಳಸಿಕೊಳ್ಳಿ, ಆಗ ಯಾವ ಗಿಡ ಗಂಟಿಗಳೂ ಬೆಳೆಯುವುದಿಲ್ಲ ಎಂದು ಹೇಳುತ್ತಾ ಶ್ರಮದಾನ, ಸ್ವಚ್ಛತೆ, ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುವ ರೀತಿಯನ್ನು ಮಕ್ಕಳಿಗೆ ಪಾಠದ ರೀತಿಯಲ್ಲಿ ಹೇಳಿ ಸಭೆಯಲ್ಲಿ ಮೇಷ್ಟ್ರಾಗಿ ಉಪನ್ಯಾಸ ನೀಡಿದರು. ಅಧ್ಯಕ್ಷರ ಮಾತಿಗೆ ಮಕ್ಕಳು ತಲೆದೂಗಿ ಚಪ್ಪಾಳೆ ಹೊಡೆದರು.