ಹಬ್ಬಕ್ಕಿಲ್ಲ ಬೆಲೆ ಏರಿಕೆ ಬಿಸಿ, ಜನಮನದಲ್ಲಿ ಖುಷಿ

Sudhee_05_Gowri_Ganesha_Festival_Sales_@_KR_Market (1)
Published on

ಪಂಕಜ ಕೆ.ಎಂ. ಬೆಂಗಳೂರು

ಗೌರಿ- ಗಣೇಶ ಹಬ್ಬಕ್ಕೆ ಎಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಗುರುವಾರ ನಗರದ ಮಾರುಕಟ್ಟೆಗಳಲ್ಲಿ ವ್ಯಾಪಾರ ಕಳೆಗಟ್ಟಿತ್ತು.
ಕೃಷ್ಣರಾಜೇಂದ್ರ ಮಾರುಕಟ್ಟೆ, ಯಶವಂತಪುರ, ದಾಸರಹಳ್ಳಿ, ಮಲ್ಲೇಶ್ವರ, ಮಡಿವಾಳ, ಜಯನಗರ, ಬನಶಂಕರಿ ಮಾರುಕಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಜನರು ಜಮಾಯಿಸಿ ಖರೀದಿಯಲ್ಲಿ ನಿರತರಾಗಿದ್ದರು. ಪರಿಣಾಮ, ಮಾರುಕಟ್ಟೆಗಳ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿ ವಾಹನಸವಾರರು ಪರದಾಡಬೇಕಾಯಿತು.

ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಈ ಹಬ್ಬದಲ್ಲಿ ಹೂಹಣ್ಣು, ತರಕಾರಿ ದರ ಕೊಂಚ ಇಳಿಕೆಯಾಗಿರುವುದು ಗ್ರಾಹಕರಲ್ಲಿ ನಿರಾಳ ಭಾವ ಮೂಡಿಸಿದೆ. ಎಲ್ಲೆಡೆ ಮಳೆ ಬೀಳುತ್ತಿರುವುದರಿಂದ ತಮಿಳುನಾಡಿನಿಂದ ಬರುತ್ತಿದ್ದ ಹೂವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ಸಗಟು ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ದಿವಾಕರ್.

ಬಟಾಣಿ ಕೆ.ಜಿ.ಗೆ 240 ರೂ.ನಂತೆ ಮಾರಾಟವಾಗುತ್ತಿದೆ. ಬೆಳ್ಳುಳ್ಳಿ 320, ಶುಂಠಿ 160 ರೂ., ಈರುಳ್ಳಿ 60 ರೂ., ಬೀನ್ಸ್, ತೊಗರಿಕಾಯಿ 70 ರೂ., ಕ್ಯಾರೆಟ್ 60 ರೂ., ಹಸಿ ಮೆಣಸಿನಕಾಯಿ 50 ರೂ., ಕ್ಯಾಪ್ಸಿಕಂ, ಬೆಂಡೆಕಾಯಿ, ತೊಂಡೆಕಾಯಿ, ಮೂಲಂಗಿ, ಬೀಟ್‌ರೂಟ್, ಎಲೆಕೋಸು, ಹೂಕೋಸು, ಬದನೆಕಾಯಿ, ಅವರೇಕಾಯಿ 40 ರೂ., ಗೋರಿಕಾಯಿ, ಹಾಗಲಕಾಯಿ, ಸೌತೇಕಾಯಿ 30 ರೂ., ಕೊತ್ತಂಬರಿ, ಪುದಿನ ಸೊಪ್ಪು ಕಟ್ಟು 50 ರೂ. ಇತರೆ ಸೊಪ್ಪುಗಳು ಕಟ್‌ಗೆ 20 ರೂ. ಇದೆ. ತರಕಾರಿ ಬೆಲೆ ಸ್ಥಿರವಾಗಿದೆ ಎನ್ನುತ್ತಾರೆ ಕೆ.ಆರ್. ಮಾರುಕಟ್ಟೆ ತರಕಾರಿ ವ್ಯಾಪಾರಿ ಸಲೀಂ.

ಹೂವು- ಹಣ್ಣಿಗೆ ಬೇಡಿಕೆ: ಗೌರಿ- ಗಣೇಶ ಹಬ್ಬದಲ್ಲಿ ತರಕಾರಿಗಿಂತ ಹೂವು ಮತ್ತು ಹಣ್ಣಿಗೆ ಬೇಡಿಕೆ ಇದೆ. ಹೆಣ್ಣುಮಕ್ಕಳಿಗೆ ಬಾಗಿನ ನೀಡುವುದರಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಹೂಹಣ್ಣು ಖರೀದಿಸುತ್ತಾರೆ. ಗಣೇಶನಿಗೆ ಅರ್ಪಿಸಲು ಗರಿಕೆ ಮತ್ತು ಎಕ್ಕದ ಹೂವಿಗೆ ಬೇಡಿಕೆ ಹೆಚ್ಚಿದೆ. ಆದರೆ ಈ ಬಾರಿ ಸ್ಥಳೀವಾಗಿಯೇ ಜನರಿಗೆ ಕಡಿಮೆ ದರದಲ್ಲಿ ಹೂಹಣ್ಣು ದೊರೆಯುತ್ತಿದೆ ಎನ್ನುತ್ತಾರೆ ವ್ಯಾಪಾರಿ ಕಮಲಮ್ಮ.

ಕೆ.ಆರ್. ಮಾರುಕಟ್ಟೆಯಲ್ಲಿ ಹೂವು ದರ (ಕೆ.ಜಿ.ಗಳಲ್ಲಿ)
ಕನಕಾಂಬರ ₹1,600
ಮಲ್ಲಿಗೆ ಮೊಗ್ಗು ₹400
ಕಾಕಡ ₹400
ಡೇರೇ ₹400
ಸುಗಂಧರಾಜ ₹200
ಸೇವಂತಿಗೆ ₹150-200
ಗುಲಾಬಿ ₹150-200
ತುಳಸಿ- ಮಾರಿಗೆ ₹100
ಕಣಗೆಲೆ ₹100
ಚೆಂಡು ₹30-40
ತಾವರೆ ಜೋಡಿ ₹50
ಎಕ್ಕದ ಹಾರ ₹50
ಗರಿಕೆ ಕಟ್ಟಿಗೆ ₹20

ಹಣ್ಣುಗಳ ದರ (ಕೆ.ಜಿ.ಗಳಲ್ಲಿ)
ಏಲಕ್ಕಿ ಬಾಳೆ ₹120-150
ಪಚ್ಚಬಾಳೆ ₹50
ದಾಳಿಂಬೆ ₹160
ಸೇಬು ₹150-250
ಮರಸೇಬು ₹150
ಸೀಬೆ ₹100
ಸೀತಾಲ ₹100
ಸಪೋಟ ₹80
ಮೂಸಂಬಿ ₹60
ದ್ರಾಕ್ಷಿ ₹50
ಮಿಕ್ಸ್ ಹಣ್ಣು ₹160

ಪೂಜಾ ಸಾಮಗ್ರಿಗಳ ದರ
ವೀಳ್ಯದೆಲೆ- ಕಟ್ಟಿಗೆ ₹100
ಮೊರ - ಜೋಡಿ ₹150
ಬಾಗಿನ ಸಾಮಗ್ರಿ ಪ್ಯಾಕ್ ₹100
ಬಾಳೆ ಕಂದು - ಜೋಡಿ ₹200-400
ತೆಂಗಿನ ಕಾಯಿ- ₹20- 40
ಮಾವಿನ ಸೊಪ್ಪು- ಕಟ್ ₹20

* ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಈಗ ಹಣ್ಣಿನ ದರ ಕಡಿಮೆಯಾಗಿದೆ. ಜನರಲ್ಲಿ ಖರೀದಿ ಉತ್ಸವವಿಲ್ಲದೆ ವ್ಯಾಪಾರವೂ ತಗ್ಗಿದೆ.
-ರಾಜು, ಹಣ್ಣಿನ ವ್ಯಾಪಾರಿ

ಬೇರೆ ಹಬ್ಬಗಳಿಗೆ ಹೋಲಿಸಿದರೆ ನಮ್ಮಲ್ಲಿ ವರಮಹಾಲಕ್ಷ್ಮೀ ಹಬ್ಬ ಹಾಗೂ ಗೌರಿ ಹಬ್ಬದಲ್ಲಿ ವ್ಯಾಪಾರ ಹೆಚ್ಚು. ಅರಿಶಿನ ಕುಂಕುಮ, ಪೂಜಾ ಸಾಮಗ್ರಿಯೊಂದಿಗೆ ಈ ಹಬ್ಬದಲ್ಲಿ ಬಾಗಿನ ಕೊಳ್ಳುವವರು ಹೆಚ್ಚು.
-ಶೇಖ್ ಅಹಮದ್, ಗ್ರಂಧಿಗೆ ವ್ಯಾಪಾರಿ

ವರಮಹಾಲಕ್ಷ್ಮೀ ಹಬ್ಬದಲ್ಲಿ ಇದ್ದ ದರಕ್ಕಿಂತ ಅರ್ಧ ಪಟ್ಟು ಬೆಲೆ ಕಡಿಮೆಯಾಗಿದೆ. ಕೆ.ಆರ್. ಮಾರುಕಟ್ಟೆಗೆ ಹೋಲಿಸಿದರೆ ಬಡಾವಣೆಗಳಲ್ಲಿಯೇ ದರ ಹೆಚ್ಚು. ಹಾಗಾಗಿ ಇಲ್ಲಿಗೆ ಬಂದಿರುವೆ.
-ಪ್ರಭಾವತಿ, ಕುರುಬರಹಳ್ಳಿ

ಗೌರಿ- ಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಆಗಬಹುದು ಎಂದುಕೊಂಡಿದ್ದೆವು. ಆದರೆ ಈ ಬಾರಿ ದರ ಹೆಚ್ಚಳದ ಬಿಸಿ ಇಲ್ಲ. ಹಾಗಾಗಿ ಸಂತೋಷವಾಗಿ ಹಬ್ಬ ಆಚರಿಸಬಹುದು.
-ರೇಖಾ, ಮಾವಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net