ಹೆಂಗಳೆಯರಲ್ಲಿ ಹರ್ಷ ಮೂಡಿಸಿದ ಗೌರಿಹಬ್ಬ

Sudhee_06_Gowri_Ganesha_Sales_@_VV_Puram (3)
Published on

ಬೆಂಗಳೂರು: ನಗರದೆಲ್ಲೆಡೆ ಶುಕ್ರವಾರ ಸಡಗರ, ಸಂಭ್ರಮದಿಂದ ಗೌರಿ ಹಬ್ಬ ಆಚರಿಸಲಾಯಿತು. ಹಬ್ಬದ ಹಿನ್ನೆಲೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಮಣ್ಣಿನ ಮೂರ್ತಿಗಳ ಮಾರಾಟ ಕಳೆಗಟ್ಟಿತ್ತು.

ಮುಂಜಾನೆಯೇ ಎದ್ದು ಮಡಿಯುಟ್ಟ ಹೆಂಗಳೆಯರು ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಸಂಪ್ರದಾಯದಂತೆ ಗೌರಿ ವಿಗ್ರಹ ತಂದು ಮನೆಯಲ್ಲಿ ಅಂದದ ಮಂಟಪ ನಿರ್ಮಿಸಿ ಅದರಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ, ಹೂಗಳಿಂದ ಅಲಂಕರಿಸಿ ಬಾಗಿನ ಹಾಗೂ ಹಣ್ಣುಗಳನ್ನಿಟ್ಟು ಪೂಜೆ ನೆರವೇರಿಸಿದರು. ಹೋಳಿಗೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಿ ದೇವಿಗೆ ನೈವೇದ್ಯ ಅರ್ಪಿಸಿದರು. ತವರಿನಿಂದ ಬಂದ ಬಾಗಿನವನ್ನು ದೇವರ ಮುಂದಿಟ್ಟು ಪೂಜಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮದೊಂದಿಗೆ ನೀಡಿದರು. ಕುಟುಂಬಸಮೇತ ದೇವಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಗಣೇಶ ಚತುರ್ಥಿ: ಹೀಗೆ ಶುಕ್ರವಾರ ಗೌರಿಯನ್ನು ಬರಮಾಡಿಕೊಂಡವರು, ಶನಿವಾರ ಗಣಪನ ಸ್ವಾಗತಕ್ಕಾಗಿ ಭರದ ಸಿದ್ಧತೆ ನಡೆಸಿದ್ದಾರೆ. ಗಣಪನಿಗೆ ಪ್ರಿಯವಾದ ಕಡುಬು, ಖರ್ಜಿಕಾಯಿ, ಮೋದಕ, ಲಾಡು, ರವೆ ಉಂಡೆ, ಚಕ್ಕುಲಿ, ಕೋಡುಬಳೆ ಮೊದಲಾದ ಖಾದ್ಯಗಳ ಸಿದ್ಧತೆಯಲ್ಲಿ ತೊಡಗಿದ್ದರು. ಮೊದಲ ದಿನ ಗೌರಮ್ಮನನ್ನು ಪೂಜಿಸಿದರೆ, ಮರುದಿನ ಗೌರಿಪುತ್ರ ವಿಘ್ನ ನಿವಾರಕ ಗಣೇಪನಿಗೆ ಪೂಜೆ. ಹಲವರು ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಾರೆ. ಉಳಿದಂತೆ ರಸ್ತೆಗೊಂದರಂತೆ ಗಣೇಶೋತ್ಸವ ಸಮಿತಿಗಳಿಂದ ವಿಶೇಷವಾಗಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಹಾಗಾಗಿ ಹಲವೆಡೆ ವೇದಿಕೆ ಸಿದ್ಧಪಡಿಸಲಾಗಿದೆ.

ಪರಿಸರಸ್ನೇಹಿ ಮೂರ್ತಿಗಳು: ಇತ್ತೀಚಿನ ವರ್ಷಗಳಲ್ಲಿ ಜನರು ಜಾಗೃತರಾಗುತ್ತಿದ್ದು, ಮಣ್ಣಿನ ಗಣಪ, ಪೇಪರ್ ಗಣಪ ಸೇರಿ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ಉಳಿದಂತೆ ಬೃಹತ್ ಮಟ್ಟದಲ್ಲಿ ಆಚರಿಸುವ ಸಂಘ- ಸಂಸ್ಥೆಗಳು ಎತ್ತರದ ಪಿಒಪಿ ಮೂರ್ತಿಗಳನ್ನು ಬಾಡಿಗೆಗೆ ಖರೀದಿಸಿ ಗಣೇಶೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ದೇವಾಲಯಗಳಲ್ಲಿ ವಿಶೇಷ ಪೂಜೆ: ನಗರದ ಬನಶಂಕರಿದೇವಿಗೆ ಗೌರಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಎಂದಿನಂತೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮುಂಜಾನೆಯಿಂದ ರಾತ್ರಿವರೆಗೂ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಲ್ಲೇಶ್ವರದ ಗಂಗಮ್ಮದೇವಿ ದೇವಾಲಯ, ವಿಜಯನಗರದ ಕನ್ನಿಕಾಪರಮೇಶ್ವರಿ ದೇವಾಲಯ, ಸರ್ಕಲ್ ಮಾರಮ್ಮದೇವಿ ದೇವಾಲಯ, ಅಣ್ಣಮ್ಮ ದೇವಾಲಯ ಸೇರಿ ನಗರದ ದೇವಿ ದೇಗುಲಗಳಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

‘ಗ್ಯಾರಂಟಿ’ ಗಣಪ: ನಗರದ ಆರ್.ವಿ. ರಸ್ತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡು ಅಕ್ಕಿ ವಿತರಿಸುತ್ತಿರುವ ‘ಗ್ಯಾರಂಟಿ’ ಗಣಪ ವಿಶೇಷವಾಗಿ ಗಮನಸೆಳೆಯುತ್ತಿದೆ. ಮತ್ತೊಂದೆಡೆ, ಕಾರ್ಗಿಲ್ ಯುದ್ಧವನ್ನು ನೆನಪಿಸುವ ಗಣಪನನ್ನು ಆರ್.ವಿ. ರಸ್ತೆಯಲ್ಲಿ ಕಾಣಬಹುದಾಗಿದೆ. ಇವುಗಳನ್ನು ಮೂರ್ತಿ ತಯಾರಕರಾದ ಶ್ರೀನಿವಾಸ್ ಸಿದ್ಧಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net