ಸೌಹಾರ್ದಯುತವಾಗಿ ಹಬ್ಬ ಆಚರಿಸಿ

Published on

ಕಿಕ್ಕೇರಿ: ಹಬ್ಬಗಳು ಭಾವೈಕ್ಯತೆ ಸಾರುವ ಪವಿತ್ರ ದಿನಗಳು. ಎಲ್ಲರೂ ಶಾಂತಿ, ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಇನ್ಸ್‌ಪೆಕ್ಟರ್ ರೇವತಿ ತಿಳಿಸಿದರು.


ಗೌರಿ-ಗಣೇಶ ಹಬ್ಬ ಆಚರಣೆ ಅಂಗವಾಗಿ ಪಟ್ಟಣದ ಆರಕ್ಷಕ ಠಾಣೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಿ ನೈರ್ಮಲ್ಯ ಕಾಪಾಡಬೇಕು. ಕಡ್ಡಾಯವಾಗಿ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಸೆಸ್ಕ್ ಅನುಮತಿ ಪಡೆದು ಗಣೇಶಮೂರ್ತಿ ಪ್ರತಿಷ್ಠಾಪಿಸಬೇಕು. ಸಾರ್ವಜನಿಕರಿಂದ ಬಲವಂತವಾಗಿ ಹಣ ವಸೂಲು, ಡಿಜೆ ಬಳಕೆ, ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಧ್ವನಿವರ್ಧಕಗಳನ್ನು ಬಳಬೇಡಿ. ಪರಿಸರ ಅನೈರ್ಮಲ್ಯಕ್ಕೆ ಕಾರಣವಾಗುವ ಪಟಾಕಿ ಸಿಡಿಸದಿರಿ. ಕೆರೆಕಟ್ಟೆಗಳಲ್ಲಿ ಜಲಚರಗಳಿಗೆ ಹಾನಿಯಾಗುವಂತ ಪೂಜಾ ಸಾಮಗ್ರಿಗಳು, ಪಿಒಪಿ ಗಣಪತಿ ವಿಸರ್ಜನೆ ಮಾಡಬಾರದು ಎಂದು ಸಲಹೆ ನೀಡಿದರು.


ವಿಶೇಷ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಿಗದಿತ ಸ್ಥಳದಲ್ಲೇ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.


ಮುಖಂಡರಾದ ರಮೇಶ್, ಅಕ್ಷಯ್, ನಾಗರಾಜು, ರವಿ, ಕೃಷ್ಣ, ಮಹೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net