ರೈತರ ನೆರವಿಗೆ ಗೌಡಗೆರೆ ಕ್ಷೇತ್ರ ಮುಂದು

1004305805
Published on

ಬೆಲೆ ಇಲ್ಲವೆಂಬ ಕೊರಗು ನಿವಾರಿಸುವ ಯತ್ನ ಬೆಳೆದ ಸಲಿಗೆ ಸಿಗಲಿದೆ ಸೂಕ್ತ ಬೆಲೆ

ಚನ್ನಪಟ್ಟಣ

ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ನೊಂದು ರಸ್ತೆಗೆ ಸುರಿಯುವ ರೈತರ ನೆರವಿಗೆ ತಾಲೂಕಿನ ಪ್ರಸಿದ್ಧ ಗೌಡಗೆರೆ ಶ್ರೀ ಕ್ಷೇತ್ರ ಮುಂದೆ ಬಂದಿದೆ. ಹೌದು. ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರ ಈಗಾಗಲೇ ಸಾಕಷ್ಟು ಪ್ರಸಿದ್ಧಿಯಾಗಿದ್ದು, ಈ ಕ್ಷೇತ್ರದಲ್ಲಿ ನೆಲೆ ನಿಂತಿರುವ ಏಷ್ಯಾದಲ್ಲಿಯೇ ಅತಿ ಎತ್ತರದ ಪಂಚಲೋಹ ವಿಗ್ರಹ ಎಂಬ ಖ್ಯಾತಿ ಇರುವ ಚಾಮುಂಡೇಶ್ವರಿ ವಿಗ್ರಹ ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದಲೂ ಜನರು ಕ್ಷೇತ್ರದತ್ತ ಆಗಮಿಸುತ್ತಾರೆ. ಅಪಾರ ಭಕ್ತಗಣ ಹೊಂದಿರುವ ಶ್ರೀ ಕ್ಷೇತ್ರ ಇದೀಗ ಅನ್ನದಾತನ ಬೆನ್ನಿಗೆ ನಿಲ್ಲುವ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದೆ.

ರೈತರ ನೆರವಿಗೆ ಶ್ರೀಕ್ಷೇತ್ರ!

ಹಲವಾರು ಸಂದರ್ಭಗಳಲ್ಲಿ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಹಲವಾರು ರೈತರು ಬೆಳೆಗಳನ್ನು ರಸ್ತೆಗೆ ಸುರಿದು ಹೋದ ಪ್ರಕರಣಗಳು ಸಾಕಷ್ಟಿವೆ. ಬೆಳೆ ಕಟಾವಿನ ಕನಿಷ್ಠ ಖರ್ಚು ಸಹ ಸಿಗದು ಎಂಬ ಕಾರಣಕ್ಕೆ ರೈತರು ಇಂತಹ ಕೆಲಸ ಮಾಡುವುದು ಸಾಮಾನ್ಯ.

ಹೀಗಾಗಿ ಇಂತಹ ರೈತರ ನೆರವಿಗೆ ನಿಲ್ಲಬೇಕೆಂದು ರೈತರ ಸಲಿಗೆ ಸಹಾಯಧನದ ರೂಪದಲ್ಲಿ ಖರೀದಿಸಲು ಶ್ರೀ ಕ್ಷೇತ್ರ ಮುಂದಾಗಿದೆ. ಈ ಸಂಬಂಧ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಪ್ರಕಟಣೆ ಹೊರಡಿಸಿದ್ದಾರೆ. ‘ರೈತರೇ ನೀವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ಆ ಬೆಳೆಯನ್ನು ನಮ್ಮ ಅನ್ನ ದಾಸೋಹ ಭವನಕ್ಕೆ ತಲುಪಿಸಿ. ನಿಮ್ಮ ಬೆಳೆಗೆ ಶ್ರೀ ಕ್ಷೇತ್ರದಿಂದ ಸೂಕ್ತ ಸಹಾಯಧನ ನೀಡಲಾಗುವುದು’ ಎಂದು ಮನವಿ ಮಾಡಿದ್ದಾರೆ.

ದಾಸೋಹ ನಿರಂತರ!

ಗೌಡಗೆರೆ ಕ್ಷೇತ್ರದಲ್ಲಿ ಅನ್ನದಾಸೋಹ ನಿರಂತರವಾಗಿರುತ್ತದೆ. ನಿತ್ಯ ಸಾವಿರಾರು ಮಂದಿ ಇಲ್ಲಿ ಪ್ರಸಾದ ಸೇವನೆ ಮಾಡುತ್ತಾರೆ. ರಜಾದಿನಗಳು ಸೇರಿ ವಿಶೇಷ ದಿನಗಳಲ್ಲಿ ಸಹಸ್ರಾರು ಭಕ್ತರಿಗೆ ಅಚ್ಚುಕಟ್ಟಾದ ದಾಸೋಹ ಮಾಡಲಾಗುತ್ತದೆ. ವಿಶಾಲವಾದ ದಾಸೋಹ ಭವನದ ವ್ಯವಸ್ಥೆ ಹೊಂದಿದ್ದು, ನೂರಾರು ಸಿಬ್ಬಂದಿ ದಾಸೋಹ ಭವನದಲ್ಲಿಯೇ ಕಾರ್ಯ ನಿರ್ವಹಿಸುತ್ತಾರೆ. ನಿತ್ಯ ದಾಸೋಹಕ್ಕೆ ಸಾಕಷ್ಟು ಸಂಖ್ಯೆಯ ದಿನಸಿ ಹಾಗೂ ತರಕಾರಿ ಬಳಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರಿಂದ ಅವರು ಬೆಳೆದ ಬೆಳೆಗಳನ್ನು ಸಹಾಯಧನದ ರೂಪದಲ್ಲಿ ಪಡೆದುಕೊಳ್ಳಲು ಮುಂದಾಗಿದೆ.

ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲ ಎಂಬ ಕಾರಣಕ್ಕೆ ರೈತರು ಬೆಳೆಗಳನ್ನು ರಸ್ತೆಗೆ ಸುರಿಯುವುದನ್ನು ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಅನ್ನದಾತರ ನೆರವಿಗೆ ನಿಲ್ಲಬೇಕು ಎಂಬ ಉದ್ದೇಶದಿಂದ ಸಹಾಯಧನದ ರೂಪದಲ್ಲಿ ಬೆಳೆಗಳನ್ನು ಖರೀದಿಸಲು ಮುಂದಾಗಿದ್ದೇವೆ. ನಮ್ಮ ಚನ್ನಪಟ್ಟಣ, ರಾಮನಗರ, ಮಾಗಡಿ, ಕುಣಿಗಲ್, ಮದ್ದೂರು ಸೇರಿದಂತೆ ಅಕ್ಕಪಕ್ಕದ ರೈತರು ಬೆಳೆಗಳನ್ನು ಸುರಿಯುವ ಬದಲು, ದಾಸೋಹ ಬಳಕೆಗೆ ನೀಡಬಹುದು. ಅದಕ್ಕೆ ಸಹಾಯಧನವನ್ನು ಸಹ ಭರಿಸುತ್ತೇವೆ.ಶ್ರೀ ಮಲ್ಲೇಶ್ ಗುರೂಜಿ ಧರ್ಮದರ್ಶಿ, ಗೌಡಗೆರೆ ಶ್ರೀ ಕ್ಷೇತ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net