ಆಸ್ತಿ ವಿವರ ಪಡೆಯದೆ ರೆವಿನ್ಯೂ ಸೈಟ್ ನೋಂದಣಿ ಮಾಡಿದ ಸಬ್​ರಿಜಿಸ್ಟ್ರಾರ್​ಗಳು ಸಸ್ಪೆಂಡ್

Sub Rigister
Published on

ಬೆಂಗಳೂರು: ಕಾವೇರಿ ಮತ್ತು ಇ-ಸ್ವತ್ತು ತಂತ್ರಾಂಶದಲ್ಲಿ ಆಸ್ತಿ ವಿವರ ಪಡೆಯದೆ ರೆವಿನ್ಯೂ (ಕಂದಾಯ) ಸೈಟ್ ನೋಂದಣಿ ಮಾಡಿದ ಆರೋಪದ ಮೇಲೆ ಮೂವರು ಉಪ ನೋಂದಣಾಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದೆ.

ಮಾದನಾಯಕನಹಳ್ಳಿ ಉಪನೋಂದಣಿ ಕಚೇರಿ ಹಿರಿಯ ಉಪನೋಂದಣಾಧಿಕಾರಿ ಲಲಿತಾ ಅಮೃತೇಶ್, ಜಾಲ ಕಚೇರಿಯ ಹಿರಿಯ ಉಪನೋಂದಣಾಧಿಕಾರಿ ರಾಮಪ್ರಸಾದ್ ಮತ್ತು ದಾಸನಪುರ ಕಚೇರಿ ಮಧುಕುಮಾರ್ ಅವರನ್ನು ಅಮಾನತು ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ.ಮೋಹನ್ ರಾಜ್ ಮೇ 26 ರಂದು ಆದೇಶಿಸಿದ್ದಾರೆ.

ಆಸ್ತಿಗಳ ನೋಂದಣಿ ವೇಳೆ ಗಣಕೀಕೃತ ಹಾಗೂ ಕಾವೇರಿ ಮತ್ತು ಇ-ಸ್ವತ್ತು ತಂತ್ರಾಂಶದ ಮೂಲಕ ವಿವರ ಪಡೆಯದೆ ಆಸ್ತಿಗಳ ನೋಂದಣಿ ಮಾಡುವಂತಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ. ಕರೊನಾ ಲಾಕ್​ಡೌನ್ ವೇಳೆ ಏ.24 ರಿಂದ ಮೇ 18ವರೆಗೆ ಕಾವೇರಿ ಮತ್ತು ಇ-ಸ್ವತ್ತು ತಂತ್ರಾಂಶದಿಂದ ಮಾಹಿತಿ ಪಡೆದು ಸಂಯೋಜನೆ ಮಾಡಿ ಆಸ್ತಿ ನೋಂದಣಿ ಮಾಡದೆ ಕರ್ತವ್ಯ ಲೋಪ ಎಸಗಿದ್ದಾರೆ. ರೆವಿನ್ಯೂ(ಕಂದಾಯ) ಸೈಟ್​ಗಳನ್ನು ನೋಂದಣಿ ಮಾಡಿರುವುದು ಇಲಾಖಾ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

ಏ.24 ರಿಂದ ಮೇ 18ರ ಅವಧಿಯಲ್ಲಿ ದಾಸನಪುರ ಉಪ ನೋಂದಣಿ ಕಚೇರಿಯಲ್ಲಿ 448 ದಾಖಲೆಗಳು ನೋಂದಣಿ ಆಗಿದೆ. ಈ ಪೈಕಿ 321 ಸೈಟ್ ನೋಂದಣಿಯಾಗಿದ್ದು, ಅವುಗಳಲ್ಲಿ 279 ಸೈಟ್​ಗಳನ್ನು ಇ-ಖಾತಾ ಇಲ್ಲದೆ ನೋಂದಾಯಿಸಿದ್ದಾರೆ. ಅದೇ ರೀತಿ ಮಾದನಾಯಕನಹಳ್ಳಿ ಕಚೇರಿಯಲ್ಲಿ 365 ನೋಂದಣಿ ಪ್ರಕ್ರಿಯೆ ನಡೆದಿದೆ. ಇದರಲ್ಲಿ 260 ಕ್ರಯಪತ್ರಗಳಾಗಿದ್ದು, 256ಕ್ಕೆ ಇ-ಖಾತಾ ಇಲ್ಲ. ಜಾಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 110 ನೋಂದಣಿ ಆಗಿದ್ದು, 57 ಸೈಟ್ ಕ್ರಯಪತ್ರವಾಗಿವೆ. ಅವುಗಳಲ್ಲಿ 15 ನ್ನು ಇ-ಖಾತ ಇಲ್ಲದೆ ನೋಂದಣಿ ಮಾಡಿದ್ದಾರೆ. ಕೆಲವರು ನೋಂದಾಯಿಸುವಾಗ ಭೂಮಿ/ಕೃಷಿ ಭೂಮಿ ಎಂದು ಆಯ್ಕೆ ಮಾಡಿಕೊಂಡು 1 ಗುಂಟೆ ಎಂದು ದಾಖಲಿಸಿಕೊಂಡು ಕೃಷಿ ಭೂಮಿಯನ್ನು ನೋಂದಾಯಿಸಿ ಸರ್ಟಿಫಿಕೇಟ್ ಆಫ್ ಸೇಲ್

(ಕ್ರಯ ಪ್ರಮಾಣಪತ್ರ) ಎಂದು ನೀಡಲಾಗಿದೆ. ಕೆಲವರು ಕಾವೇರಿ ತಂತ್ರಾಂಶದಲ್ಲಿ ಆರ್​ಡಿಪಿಆರ್ ಎಂದು ಬದಲಾಗಿ ಬಿಬಿಎಂಪಿ/ಅರ್ಬನ್ ಡೆವಲಪ್​ವೆುಂಟ್ ಅಥಾರಿಟಿ ಎಂದು ತಪು್ಪ ಆಯ್ಕೆ ಮಾಡಿ ನೋಂದಾಯಿಸಿರುವುದು ಇಲಾಖಾ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕಾಯ್ದೆಯಲ್ಲಿ ಇಲ್ಲ ಸುತ್ತೋಲೆ ಮೇಲೆ ಶಿಕ್ಷೆ

ಕರ್ನಾಟಕ ರಿಜಿಸ್ಟ್ರೇಷನ್ ಕಾಯ್ದೆಯಲ್ಲಿ ರೆವಿನ್ಯೂ ಸೈಟ್​ಗಳ ನೋಂದಣಿ ತಡೆಯುವ ಅಧಿಕಾರ ಇಲ್ಲ. ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಸೂಕ್ತ ಕರಡು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ 2019ರ ನ.11ರಂದು ಕಂದಾಯ ಇಲಾಖೆ(ನೋಂದಣಿ ಮತ್ತು ಮುದ್ರಾಂಕ) ಅಧೀನ ಕಾರ್ಯದರ್ಶಿ ಕೆ. ಏಕೇಶ್ ಬಾಬು, ಕಮಿಷನರ್​ಗೆ ಸೂಚಿಸಿದ್ದರು. ಆದರೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಮಿಷನರ್, ತಿದ್ದುಪಡಿಗೆ ಕರಡು ತಯಾರಿಸಿ ಕೊಡುವ ಗೋಜಿಗೆ ಇಲ್ಲಿಯವರೆಗೂ ಹೋಗಿಲ್ಲ. ಬದಲಿಗೆ ತಾನೂ ಹೊರಡಿಸಿದ್ದ ಸುತ್ತೋಲೆ ವಾಪಸ್ ಪಡೆದಿದ್ದಾರೆ. ಇದೇ ಆರೋಪಕ್ಕೆ ಗುರಿಯಾಗಿದ್ದ 8 ಅಧಿಕಾರಿ/ನೌಕರರನ್ನು ಇಲಾಖಾ ತನಿಖೆಯಲ್ಲಿ ನಿದೋರ್ಷಿಗಳು ಎಂದು ಆರೋಪ ಮುಕ್ತ ಮಾಡಲಾಗಿದೆ. ರಾಜಕೀಯ ಒತ್ತಡದಿಂದ ಉದ್ದೇಶಪೂರ್ವಕವಾಗಿ ಅಮಾನತು ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ ಮೆಟ್ಟಿಲೇರುವುದಾಗಿ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

3,524 ಕೋಟಿ ರೂ. ಖೋತಾ

ಕೋವಿಡ್-19 ಮತ್ತು ರೆವಿನ್ಯೂ ಸೈಟ್​ಗಳ ನೋಂದಣಿ ನಿಲ್ಲಿಸಿರುವ ಪರಿಣಾಮ 2020-21ನೇ ಸಾಲಿನಲ್ಲಿ 3524 ಕೋಟಿ ರೂ. ಕಡಿಮೆ ತೆರಿಗೆ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಅಂದಾಜಿಸಿದೆ. ಆಸ್ತಿ ಖರೀದಿಗೆ ಪ್ರೋತ್ಸಾಹಿಸಲು 20 ಲಕ್ಷ ರೂ. ಮೌಲ್ಯದ ಅಪಾರ್ಟ್​ವೆುಂಟ್​ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕ ಶೇ. 5ರಿಂದ 2ಕ್ಕೆ ಇಳಿಕೆ ಹಾಗೂ 35 ಲಕ್ಷ ರೂ. ಮೌಲ್ಯದ ನೋಂದಣಿಗೆ ಶೇ.5 ರಿಂದ 3 ಇಳಿಸುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಕಂದಾಯ ನಿವೇಶನ ನೋಂದಣಿಗೆ ಅವಕಾಶ ನೀಡದ ಕಾರಣ ರಿಯಲ್ ಎಸ್ಟೇಟ್ ಚೇತರಿಕೆ ಕಾಣುವುದು ಕಷ್ಟ ಎಂಬುದು ಉದ್ಯಮಿಗಳ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net