

ಹೇಮನಾಥ್ ಪಡುಬಿದ್ರಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ನಿರ್ವಹಣೆಯಾಗುತ್ತಿರುವ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿರುವ ಸರ್ಕಾರಿ ಮೌಲಾನಾ ಅಜಾದ್ ಮಾದರಿ ಶಾಲೆ ತರಗತಿ ಕೊಠಡಿಗಳು ಸೋರುತ್ತಿದ್ದು, ಶಿಥಿಲ ಕಟ್ಟಡದಿಂದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾಠ ಕೇಳುವ ದಯನೀಯ ಸ್ಥಿತಿ ಎದುರಾಗಿದೆ.
2018-19ರ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕಾಪು ತಾಲೂಕಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೂಲಕ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಶಾಲೆ (ಆಂಗ್ಲ ಮಾಧ್ಯಮ) ಮಂಜೂರಾಗಿತ್ತು. ಕಾಪು ಮಲ್ಲಾರು ಉರ್ದು ಶಾಲಾ ಕಟ್ಟಡದಲ್ಲಿಯೇ ಇದ್ದ ತರಗತಿ ಕೊಠಡಿ ಬಳಸಿ ಅಂದು ಶಾಲೆ ಆರಂಭಿಸಲಾಗಿತ್ತು. ಎರಡು ಎಸ್ಸೆಸ್ಸೆಲ್ಸಿ ಬ್ಯಾಚ್ಗಳು ಉತ್ತೀರ್ಣರಾಗಿ ಹೋದರೂ ಇನ್ನೂ ಶಿಥಿಲ ಕಟ್ಟಡದಲ್ಲಿಯೇ ಕಾರ್ಯಾಚರಿಸುತ್ತಿವೆ.
ಈಗಿರುವ ಕಟ್ಟಡದ ತರಗತಿ ಕೊಠಡಿಗಳು ನಾದುರಸ್ತಿಯಲ್ಲಿದ್ದು, ಕಿಟಕಿಗೆ ಬಾಗಿಲುಗಳಿಲ್ಲದೆ ಮಳೆ ನೀರು ತರಗತಿಯೊಳಗೆ ಬೀಸುತ್ತಿದೆ. ಮಹಡಿ ಹೆಂಚುಗಳು ಒಡೆದು ಹೋಗಿದ್ದು, ನೀರು ಸೋರುತ್ತಿದೆ. ಜೋರು ಮಳೆ ಬಂದಲ್ಲಿ ಸೋರುವಿಕೆಯಿಂದ ವಿದ್ಯಾರ್ಥಿಗಳು ಡೆಸ್ಕ್ ಬೆಂಚ್ ಸರಿಸಿ ಪುಸ್ತಕ ಬ್ಯಾಗ್ ಒದ್ದೆಯಾಗುವುದನ್ನು ರಕ್ಷಿಸಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದೆ. ವಿದ್ಯುತ್ ಸಂಪರ್ಕ ಇದ್ದರೂ ತರಗತಿ ಕೊಠಡಿಗಳಿಗೆ ಬಲ್ಬ್ಗಳಿಲ್ಲದೆ ಕತ್ತಲೆಯಲ್ಲಿ ಪಾಠಕೇಳಾಬೇಕಾದ ಪಾಡು ವಿದ್ಯಾರ್ಥಿಗಳದ್ದು. ಶ್ಷಿಕರ ಕಚೇರಿಯಲ್ಲಂತೂ ಕಿಟಕಿ ಬಾಗಿಲುಗಳಿಲ್ಲದೆ ಪುಸ್ತಕ, ಗ್ರಂಥಾಲಯ ಸಹಿತ ವಿವಿಧ ವಸ್ತುಗಳು ಒದ್ದೆಯಾಗುತ್ತಿವೆ. ಕಾಂಕ್ರೀಟ್ ಮೇಲ್ಛಾವಣಿ ಕಚೇರಿ ಕೊಠಡಿಯೂ ಸೋರುತ್ತಿದ್ದು. ಒದ್ದೆಯಾಗದಂತೆ ಬಕೆಟ್ ಇಟ್ಟು ನೀರು ಹೊರಚೆಲ್ಲಬೇಕಾದ ಪರಿಸ್ಥಿತಿ ಶಿಕ್ಷಕರದ್ದಾಗಿದೆ.
ಎಲ್ಲ ಕಲಿಕಾ ಸವಲತ್ತು ಉಚಿತವಾಗಿ ಸಿಗುತ್ತಿದ್ದು, ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವಿದ್ದರೂ, ಶಿಥಿಲ ಕಟ್ಟಡದಿಂದಾಗಿ ಮಕ್ಕಳ ದಾಖಲಾತಿಯೂ ಅಷ್ಟಕಷ್ಟೇ ಆಗಿದೆ. 6ರಿಂದ 10ನೇ ತರಗತಿವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, 2022-23ರಲ್ಲಿ 23 ವಿದ್ಯಾರ್ಥಿಗಳಿದ್ದ ಎಸ್ಸೆಸ್ಸೆಲ್ಸಿ ಪ್ರಥಮ ಬ್ಯಾಚ್ ಶೇ.81 ಫಲಿತಾಂಶ ದಾಖಲಾಗಿತ್ತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೇವಲ 6 ವಿದ್ಯಾರ್ಥಿಗಳಿದ್ದು, ಶೇ.100 ಫಲಿತಾಂಶ ದಾಖಲಾಗಿದೆ. ಪ್ರಸ್ತುತ 6ನೇ ತರಗತಿಯಲ್ಲಿ 7, 7ರಲ್ಲಿ 6, 8ರಲ್ಲಿ 7, 9ರಲ್ಲಿ 21, 10ನೇ ತರಗತಿಯಲ್ಲಿ 20 ವಿದ್ಯಾರ್ಥಿಗಳಿದ್ದಾರೆ. ಶೈಕ್ಷಣಿಕ ವರ್ಷದ ಮುಕ್ತಾಯದ ವೇಳೆ ಶಾಲಾ ವ್ಯಾಪ್ತಿಯ ಮನೆಗಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಶಿಕ್ಷಕರು ಪ್ರೇರೆಪಿಸಿದರೂ, ಶಿಥಿಲ ಕಟ್ಟಡದಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಹೊಸ ಕಟ್ಟಡ ನಿರ್ಮಾಣವಾದಲ್ಲಿ ಮಕ್ಕಳನ್ನು ನಾವಾಗಿಯೇ ಕಳುಹಿಸುತ್ತೇವೆ ಎನ್ನುವ ಉತ್ತರ ಪಾಲಕರು ನೀಡುತ್ತಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ ಮುಖ್ಯ ಶಿಕ್ಷಕರೊಬ್ಬರಿದ್ದು, ಇಲಾಖೆ ಕಾರ್ಕಳ ಮತ್ತು ಮಲ್ಲಾರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲಾಖೆಯಿಂದ ವೇತನ ಪಡೆಯುವ 6 ಜನ ಗೌರವ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಪೂರ್ಣಕಾಲಿಕ ಶಿಕ್ಷಕರ ನೇಮಕಾತಿ ನಡೆಯುವ ಹಸಿರು ನಿಶಾನೆ ದೊರೆತ್ತಿದ್ದು, ಇಲಾಖೆ ಶಿಕ್ಷಕರ ನೇಮಕ ನಿರೀಕ್ಷೆಯಲ್ಲಿದೆ.
ಶಾಲಾ ಕೊಠಡಿಗಳ ಹೆಂಚುಗಳನ್ನು ಪ್ರತಿ ವರ್ಷವೂ ಕಿಡಿಗೇಡಿಗಳು ಒಡೆದು ಹಾಕುತ್ತಿದ್ದು, ಕಿಟಕಿಗಳಿಗೆ ಅಳವಡಿಸುವ ಪ್ಲಾಸ್ಟಿಕ್ ಶೀಟ್ ಹರಿದು ಹಾಕುತ್ತಿದ್ದಾರೆ. ಕಿಟಕಿ ಹಾಗೂ ಬಾಗಿಲು ಮುಚ್ಚಿದ್ದರೂ ಶಾಲಾ ಆವರಣದೊಳಗೆ ಪ್ರವೇಶಿಸಿ, ಡೆಸ್ಕ್ ಬೆಂಚ್ ದೂಡಿ ಹಾಕಿ ಹಾನಿ ಮಾಡುವ ಪ್ರವೃತ್ತಿ ಪ್ರತಿ ಶೈಕ್ಷಣಿಕ ರಜೆಯಲ್ಲಿ ನಡೆಯುತ್ತಿರುವುದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಶಾಲೆ ಕಾರ್ಯಾರಂಭಗೊಂಡು 6 ವರ್ಷಗಳಾಗುತ್ತಾ ಬಂದರೂ ಸೂಕ್ತ ಜಮೀನಿಗಾಗಿ ಹುಡುಕಾಟ ನಡೆದಿತ್ತು. ಒಂದೂವರೆ ವರ್ಷದ ಹಿಂದೆಯಷ್ಟೇ ಬೆಳಪು ಗ್ರಾಮದಲ್ಲಿ ಒಂದು ಎಕರೆ ಜಮೀನು ಅಂತಿಮವಾಗಿದ್ದು, ಶಾಲೆ ಹೆಸರಿನಲ್ಲಿ ಪಹಣಿಯೂ ಆಗಿದೆ. ಕಟ್ಟಡ ನಿರ್ಮಾಣಕ್ಕೆ ಇಲಾಖೆಯಿಂದ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದರೂ ಇನ್ನೂ ಅನುದಾನವ ಬಿಡುಗಡೆಯಾಗಿಲ್ಲ.
ಬೆಳಪುವಿನಲ್ಲಿ ಒಂದು ಎಕರೆ ಜಮೀನು ಮಂಜೂರಾಗಿದ್ದು, ಮೌಲಾನಾ ಆಜಾದ್ ಮಾದರಿ ಶಾಲೆ ಹೆಸರಿನಲ್ಲಿ ಪಹಣಿಯೂ ಆಗಿದೆ. ಕಟ್ಟಡ ನಿರ್ಮಾಣಕ್ಕೆ ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾಗಿಲ್ಲ. ಸ್ಥಳೀಯ ಶಾಸಕರು ಶಾಲೆಗೆ ಭೇಟಿ ನೀಡಿದ್ದು, ಇಲಾಖೆ ನಿರ್ದೇಶಕರೊಂದಿಗೆ ಚರ್ಚಿಸಿದ್ದಾರೆ. ಈಗಿರುವ ಕಟ್ಟಡ ಸಣ್ಣಪುಟ್ಟ ದುರಸ್ತಿ ಪ್ರತಿ ವರ್ಷ ಇಲಾಖೆಯಿಂದ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರೇ ಹೆಚ್ಚಿರುವ ಇಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳ ಸಲುವಾಗಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಹೊಸ ಕಟ್ಟಡ ನಿರ್ಮಾಣವಾದಲ್ಲಿ ಮಕ್ಕಳನ್ನು ತಾವೇ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ಇದೀಗ ಮತ್ತೆ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು.-ಪೂರ್ಣಿಮಾ ಬಿ.ಚೂರಿ, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಡುಪಿ