ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು

FotoJet (1)
Published on

ಪುರಸಭೆಗೆ ಆಸ್ತಿ ದಾಖಲೆ ಹಸ್ತಾಂತರ ವಿಳಂಬ ಬಾಗೇಪಲ್ಲಿ ಹಲವು ವಾರ್ಡ್‌ಗಳಿಗಿಲ್ಲ ಮೂಲಸೌಕರ್ಯ

ಬಾಗೇಪಲ್ಲಿ: ಪುರಸಭೆ ಪ್ರದೇಶಕ್ಕೆ ಗಡಿ ರೇಖೆ ಗುರುತಿಸುವ ಹಾಗೂ ಗಡಿ ರೇಖೆಯೊಳಗಿನ ಆಸ್ತಿಗಳನ್ನು ಪುರಸಭೆಗೆ ಹಸ್ತಾಂತರಿಸುವ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ತಹಸೀಲ್ದಾರ್ ಹಾಗೂ ತಾಪಂ ಇಒ ನಡೆಯಿಂದ ಬಾಗೇಪಲ್ಲಿಯ ಹಲವು ವಾರ್ಡ್‌ಗಳಿಗೆ ಮೂಲಸೌಕರ್ಯ ಸಿಗದೆ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ.

ಪುರಸಭೆ ವ್ಯಾಪ್ತಿಯಲ್ಲಿರುವ 1, 5, 6, 7, 8, 9, 16 ಹಾಗೂ 18ನೇ ವಾರ್ಡ್‌ನ ಪ್ರದೇಶದಲ್ಲಿರುವ ಪರಗೋಡು, ಘಂಟಂವಾರಪಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿರುವ ನಿವೇಶನ, ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಕುಡಿಯುವ ನೀರು, ನೈರ್ಮಲ್ಯ, ಬೀದಿದೀಪ, ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸುವ ಹೊಣೆ ಬಾಗೇಪಲ್ಲಿ ಪುರಸಭೆಯದ್ದಾಗಿದೆ. ಆಸ್ತಿ ತೆರಿಗೆ ವಸೂಲಿಗೆ ನಾಮುಂದು ತಾಮುಂದು ಎಂದು ಪರಗೋಡು, ಘಂಟಂವಾರಪಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಪಟ್ಟಣದ ಗಡಿ ರೇಖೆಯಲ್ಲಿರುವ ವಾರ್ಡ್‌ಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ಪುರಸಭೆ ಅಧಿಕಾರಿಗಳು, ಸದಸ್ಯರು ನಿರ್ಲಕ್ಷ್ಯ ತೋರುತ್ತಿದ್ದು, ಅಲ್ಲಿನ ನಿವಾಸಿಗಳ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ.

2006ರ ರಾಜ್ಯ ಪತ್ರದ ಆದೇಶದಲ್ಲಿ ಸೂಚಿಸಿರುವಂತೆ ಬಾಗೇಪಲ್ಲಿ ಪುರಸಭೆ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಆಸ್ತಿಗಳನ್ನು ಹಸ್ತಾಂತರ ಮಾಡದೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಪರಗೋಡು, ಘಂಟಂವಾರಪಲ್ಲಿ ಪಂಚಾಯಿತಿ ಪಿಡಿಒಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಅಂದಿನ ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿಗಳು 2021ರ ನವೆಂಬರ್‌ನಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದರೂ ಪ್ರಯೋಜನ ಇಲ್ಲದಂತಾಗಿದೆ.

ಪಿಡಿಒಗಳದ್ದೇ ಕಾರುಬಾರು

ಬಾಗೇಪಲ್ಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಪುರಸಭೆ ಯೋಜನಾ ಪ್ರದೇಶವನ್ನು ಗುರುತಿಸಿ ಪುರಸಭೆ ಗಡಿ ರೇಖೆಯೊಳಗಿರುವ ಗ್ರಾಮ ಪಂಚಾಯಿತಿ ಆಸ್ತಿಗಳನ್ನು ಹಸ್ತಾಂತರ ಮಾಡುವಂತೆ ರಾಜ್ಯ ಸರ್ಕಾರ 2006ರಲ್ಲಿಯೇ ಅಧಿಸೂಚನೆ ಹೊರಡಿಸಿತ್ತು. ಇದಾಗಿ 18 ವರ್ಷ ಕಳೆದರೂ, ಪರಗೋಡು, ಘಂಟಂವಾರಪಲ್ಲಿ ಪಿಡಿಒಗಳು ಸರ್ಕಾರದ ಆದೇಶಕ್ಕೆ ಕವಡೆ ಕಿಮ್ಮತ್ತು ನೀಡದೆ ಅಧಿಕಾರ ಚಲಾಯಿಸುತ್ತಿದ್ದಾರೆ.

"ಬಾಗೇಪಲ್ಲಿ ಪುರಸಭೆಯಲ್ಲಿ 2024ರ ಅ.3ರಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಪುರಸಭೆ ವ್ಯಾಪ್ತಿಯಲ್ಲಿರುವ ಗ್ರಾಪಂ ಆಸ್ತಿಗಳನ್ನು ಮೂರು ತಿಂಗಳೊಳಗೆ ಪುರಸಭೆಗೆ ಹಸ್ತಾಂತರ ಮಾಡುವುದಾಗಿ ತಾಪಂ ಇಒ ತಿಳಿಸಿ 5 ತಿಂಗಳೂ ಕಳೆದರೂ ಆಸ್ತಿ ದಾಖಲೆಗಳನ್ನು ಹಸ್ತಾಂತರಿಸಿಲ್ಲ. ದಾಖಲೆಗಳನ್ನು ಹಸ್ತಾಂತರಿಸಿದರೆ ಪುರಸಭೆ ಆದಾಯ ಹೆಚ್ಚುವ ಜತೆಗೆ ಮೂಲಸೌಕರ್ಯ ಕಲ್ಪಿಸಲು ಅನುಕೂಲವಾಗುತ್ತದೆ." - ಎಸ್‌ಟಿಡಿ ಮೂರ್ತಿ, 9ನೇ ವಾರ್ಡ್ ಸದಸ್ಯ "ಸಾಮಾನ್ಯ ಸಭೆಯಲ್ಲಿ ಆಸ್ತಿ ವಹಿಗಳ ಹಸ್ತಾಂತರಕ್ಕೆ ತಾಪಂ ಇಒ 3 ತಿಂಗಳ ಕಾಲಾವಕಾಶ ಕೋರಿದ್ದಾರೆ. ಅದರಂತೆ ಇತ್ತೀಚಿನ ದಿನಗಳಲ್ಲಿ ತಾಪಂ ಇಒ ಕಚೇರಿಗೆ ಪತ್ರ ವ್ಯವಹಾರ ನಡೆಸಿ ಗ್ರಾಪಂ ಪಿಡಿಒಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಆಸ್ತಿ ದಾಖಲೆಗಳ ಹಸ್ತಾಂತರಕ್ಕೆ ಸಿದ್ಧತೆ ನಡೆದಿದೆ." - ಎಂ.ಶ್ರೀನಿವಾಸ್, ಮುಖ್ಯಾಧಿಕಾರಿ, ಬಾಗೇಪಲ್ಲಿ ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net