

ಬೆಂಗಳೂರು: ಈಗಾಗಲೇ 5ನೇ ತರಗತಿವರೆಗಿನ ಆನ್ಲೈನ್ ತರಗತಿಗಳನ್ನು ರದ್ದು ಮಾಡಿರುವ ರಾಜ್ಯ ಸರ್ಕಾರ ಈ ನಿರ್ಧಾರವನ್ನು 9ನೇ ತರಗತಿಯವರೆಗೂ ವಿಸ್ತರಿಸಲು ಸಿದ್ಧತೆ ನಡೆಸಿದೆ.
ಈಗಾಗಲೇ ಈ ಕುರಿತು ಕೂಲಂಕಷವಾಗಿ ಸಮಾಲೋಚಿಸಿ ಶಿಫಾರಸು ನೀಡುವಂತೆ ತಜ್ಞರ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಈ ಬಗ್ಗೆ ವಿಸ್ತೃತವಾದ ಚರ್ಚೆ ನಡೆದಿದೆ.
ಸದ್ಯಕ್ಕೆ 7ನೇ ತರಗತಿಯವರೆಗೂ ಆನ್ಲೈನ್ ತರಗತಿಗಳನ್ನು ರದ್ದು ಮಾಡುವಂತೆ ಕೆಲವು ಸಚಿವರು ಸಂಪುಟ ಸಭೆಯಲ್ಲಿ ಸಲಹೆ ನೀಡಿದ್ದನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಅವರೇ ಖಚಿತಪಡಿಸಿದ್ದಾರೆ. ಈ ಕುರಿತು ನಿರ್ಧಾರವೇ ಆಗಿಬಿಟ್ಟಿದೆ ಎಂಬರ್ಥದಲ್ಲಿ ಸಚಿವ ಮಾಧುಸ್ವಾಮಿ ಮೊದಲು ಹೇಳಿಕೆ ನೀಡಿದರಾದರೂ ನಂತರ ಇದು ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ಸುರೇಶ್ಕುಮಾರ್ ಸ್ಪಷ್ಟಪಡಿಸಿದರು.
ಭಾರತರತ್ನ ಸಿ.ಎನ್.ಆರ್. ರಾವ್ ಅವರು ಗುರುವಾರ ಬೆಳಗ್ಗೆ ಸಚಿವ ಸುರೇಶ್ಕುಮಾರ್ ಅವರಿಗೆ ಫೋನ್ ಮಾಡಿ, ಐದನೇ ತರಗತಿಯವರೆಗೆ ಆನ್ಲೈನ್ ತರಗತಿಗಳನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರ ಸೂಕ್ತವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಈ ವಿಷಯವನ್ನು ಸ್ವತಃ ಸುರೇಶ್ಕುಮಾರ್ ಅವರೇ ಸಂಪುಟ ಸಭೆಯ ಗಮನಕ್ಕೆ ತಂದರು. ಆಗ ಕೆಲವು ಸಚಿವರು ಕೂಡ ಈ ನಿರ್ಧಾರವನ್ನು ಬೆಂಬಲಿಸಿದರಲ್ಲದೆ, ಇದನ್ನು ಏಳನೇ ತರಗತಿಯವರೆಗೂ ವಿಸ್ತರಿಸಬೇಕೆಂದು ಅಭಿಪ್ರಾಯಪಟ್ಟರು. ಆದರೆ ಆ ಕುರಿತು ಸಂಪುಟ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಈ ಮಧ್ಯೆ, ಆನ್ಲೈನ್ ತರಗತಿಗಳ ಸಾಧಕಬಾಧಕಗಳ ಕುರಿತು ಸಮಾಲೋಚಿಸಿ ಶಿಫಾರಸು ನೀಡಲು ರಚಿಸಲಾಗಿರುವ ತಜ್ಞರ ಸಮಿತಿ, ಇನ್ನು 10 ದಿನಗಳಲ್ಲಿ ತನ್ನ ವರದಿ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಅದನ್ನು ಆಧರಿಸಿ ಮತ್ತು ಅಲ್ಲಿಯವರೆಗೆ ವ್ಯಕ್ತವಾಗುವ ಸಾರ್ವಜನಿಕರ ಅಭಿಪ್ರಾಯಗಳನ್ನು ನೋಡಿಕೊಂಡು 9ನೇ ತರಗತಿಯವರೆಗೂ ಆನ್ಲೈನ್ ಶಿಕ್ಷಣವನ್ನು ನಿಷೇಧಿಸುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.