

ಬೆಂಗಳೂರು: ಆ್ಯಸಿಡ್ ದಾಳಿಗೆ ಒಳಗಾದ ಯುವತಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡುವೆ. ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಸೂಚಿಸುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ನೊಂದ ಯುವತಿ ಹಾಗೂ ಪಾಲಕರು ಸಲ್ಲಿಸಿದ ಅಹವಾಲನ್ನು ಮಂಗಳವಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಮಾಸಿಕ ಗೌರವಧನ 3,000 ರಿಂದ 10 ಸಾವಿರ ರೂ.ಗೆ ಹೆಚ್ಚಿಸಿದ್ದು, ನೊಂದ ಯುವತಿ ಕುಟುಂಬದ ಪರಿಸ್ಥಿತಿ ಅವಲೋಕಿಸಿ ಮಂಜೂರು ಮಾಡಲು ಅಧಿಕಾರಿಗಳಿಗೆ ತಿಳಿಸಿರುವೆ. ಮನೆ ಮಂಜೂರು ಮಾಡಲು ಕೇಳಿಕೊಂಡಿದ್ದು, ಬಡವರಿಗೆ ನಿರ್ಮಿಸುತ್ತಿರುವ ಮನೆಗಳ ಪೈಕಿ ಒಂದನ್ನು ಮಂಜೂರು ಮಾಡುವ ಕುರಿತು ವಸತಿ ಸಚಿವರೊಂದಿಗೆ ಚರ್ಚಿಸಿ ಸಲಹೆ ನೀಡುವೆ ಎಂದರು.