ಮಾರುಕಟ್ಟೆ ಶುಲ್ಕ ಇಳಿಕೆಗೆ ಮುಂದಾದ ಸರ್ಕಾರ

27byd2
Published on

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ರಾಜ್ಯದ ಎಪಿಎಂಸಿ ಮಾರುಕಟ್ಟೆ ಶುಲ್ಕ (ಸೆಸ್) ಇಳಿಕೆ ಮಾಡಲು ನಿರ್ಧರಿಸಿದ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.

ಪಟ್ಟಣದ ಸಿದ್ಧೇಶ್ವರ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದದ ವರ್ತಕರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಸರ್ಕಾರದ ನಿರ್ಧಾರದ ಕುರಿತು ರ್ಚಚಿಸಿ, ಬಳಿಕ ಅವರು ಮಾತನಾಡಿದರು.

ಮಾರುಕಟ್ಟೆ ಶುಲ್ಕ ಶೇ. 1.50ರಿಂದ 0.35ಕ್ಕೆ ಇಳಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ಥಳೀಯವಾಗಿ ಎಲ್ಲ ವರ್ತಕರು ಮುಕ್ತವಾಗಿ ಸ್ವಾಗತಿಸಿದ್ದು, ರೈತರ ಹಾಗೂ ವರ್ತಕರ ಹಿತಕಾಯ್ದ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ಜಿಎಸ್​ಟಿ ಸಮಸ್ಯೆ ನಿವಾರಣೆಗೆ ಮನವಿ: ಜಿಎಸ್ಟಿ ಫಾಮರ್್​ನ 35ಎ ಹಾಗೂ ಬಿ ತೆಗೆದು ಹಾಕುವುದು, ಮಾರುಕಟ್ಟೆ ಶುಲ್ಕವನ್ನು ಖರೀದಿದಾರರೆ ತುಂಬಲು ಅವಕಾಶ ಕಲ್ಪಿಸುವುದು ಸೇರಿ ಇತ್ಯಾದಿ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗೆ ವರ್ತಕರ ಸಂಘದಿಂದ ಮನವಿ ಸಲ್ಲಿಸಿದ್ದೆವು. ವಾರದ ಹಿಂದೆ ಮಾರುಕಟ್ಟೆಗೆ ಆಗಮಿಸಿದ್ದ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರಗೆ ಮನವಿ ಸಲ್ಲಿಸಲಾಗಿತ್ತು. ಸಚಿವರಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿ.ಸಿ. ಪಾಟೀಲ ಸೇರಿ ಕೈಗಾರಿಕೆ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ವರ್ತಕರ ಸಮಸ್ಯೆ ಬಗೆಹರಿಸಲು ಸಚಿವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ವರ್ತಕರ ಸಂಘದ ಗೌರವ ಕಾಯದರ್ಶಿ ರಾಜಣ್ಣ ಮೋರಗೇರಿ, ಜಂಟಿ ಕಾರ್ಯದರ್ಶಿ ಮಹಾಂತೇಶ ಆಲದಗೇರಿ, ಸುರೇಶ ಮೇಲಗಿರಿ, ಶರಣಯ್ಯ ಬೂದಿಹಾಳಮಠ, ಜಗದೀಶ ರೋಣದ, ಎಂ.ಟಿ. ಹಾವೇರಿ, ನಾಗರಾಜ ಕುಳೇನೂರು, ದೇವರಾಜ ಹುಡೇದ ಇತರರಿದ್ದರು.

ಬಂದ್ ಮಾಡದಿರಲು ನಿರ್ಧಾರ: ವಾಣಿಜ್ಯೋದ್ಯಮ ಸಂಘ ನೀಡಿದ್ದ ಕರೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು. ಆಗ ವರ್ತಕರು, ಕರೊನಾ ವೈರಸ್​ನಿಂದ ಎರಡು ಮೂರು ತಿಂಗಳಿಂದ ಮಾರುಕಟ್ಟೆ ಸಾಕಷ್ಟು ತೊಂದರೆ ಅನುಭವಿಸಿದೆ. ಆದಾಗ್ಯೂ ರೈತರ ಹಿತದೃಷ್ಟಿಯಿಂದ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವ ಮೂಲಕ ವಹಿವಾಟು ನಡೆಸಿದ್ದೇವೆ. ಶುಲ್ಕ ಇಳಿಕೆಗೆ ಒತ್ತಾಯಿಸಿ ಎಲ್ಲರೂ ಬೆಂಬಲಿಸಿರುವುದು ಸೂಕ್ತವಾಗಿದೆ. ಈಗ ರೈತರು ಮೆಣಸಿನಕಾಯಿ ಬೀಜ ಬಿತ್ತನೆ, ಸಸಿ ಹಚ್ಚುವುದು ಇತ್ಯಾದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯ ವಹಿವಾಟು ಸ್ಥಗಿತಗೊಳಿಸುವುದರಿಂದ ಪದೇಪದೆ ತೊಂದರೆಯಾಗುತ್ತಿದೆ. ಸರ್ಕಾರ ಇಳಿಕೆ ಮಾಡಲು ನಿರ್ಧರಿಸಿರುವುದು ಸೂಕ್ತವೆನಿಸಿದೆ. ಪುನಃ ಮಾರುಕಟ್ಟೆ ಬಂದ್ ಮಾಡುವುದು ಬೇಡವೆಂದು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಅಧ್ಯಕ್ಷರು ಎಲ್ಲರ ಅಭಿಪ್ರಾಯದಿಂದ ಮಾರುಕಟ್ಟೆ ಬಂದ್ ಮಾಡುವುದು ಬೇಡವೆಂದು ತೀರ್ವನಿಸಿದರು. ಹೀಗಾಗಿ ಎಂದಿನಂತೆ ಸೋಮವಾರ ಮಾರುಕಟ್ಟೆ ವಹಿವಾಟು ನಡೆದಿದ್ದು, 5750 ಚೀಲಗಳು ಟೆಂಡರ್​ನಲ್ಲಿ ಆವಕಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net