ಜಿಲ್ಲೆಯ 4 ಶಾಲೆಗಳಿಗೆ ಸರ್ಕಾರದ ಪ್ರಶಸ್ತಿ

Hulikal
Published on

* ‘ಪುಷ್ಟಿ’ ಕಾರ್ಯಕ್ರಮದಡಿ ಆಯ್ಕೆ

* ಎಸ್‌ಡಿಎಂಸಿಗಳ ಶ್ರಮಕ್ಕೆ ಸಂದ ಗೌರವ

* ಬಹುಮಾನ ರೂಪದಲ್ಲಿ 1 ಲಕ್ಷ ರೂ. ಅನುದಾನ

ಗಂಗಾಧರ್ ಬೈರಾಪಟ್ಟಣ ರಾಮನಗರ

ಸರ್ಕಾರಿ ಶಾಲೆಯನ್ನು ಗುಣಾತ್ಮಕ ಶಿಕ್ಷಣ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪುಷ್ಟಿ ಕಾರ್ಯಕ್ರಮದಡಿ ರಾಜ್ಯಸರ್ಕಾರ ನೀಡುವ ಪ್ರಶಸ್ತಿಗೆ ಜಿಲ್ಲೆಯ ನಾಲ್ಕು ಶಾಲೆಗಳು ಆಯ್ಕೆಯಾಗಿವೆ.

ವಿದ್ಯಾರ್ಥಿಗಳ ಪಾಲಕರನ್ನು ತೊಡಗಿಸಿಕೊಂಡು ಸರ್ಕಾರ ಶಾಲೆಗಳ ಅಭ್ಯುದಯಕ್ಕೆಂದು ಹಲವು ವರ್ಷದ ಹಿಂದೆ ಎಸ್‌ಎಂಡಿಸಿ ರಚನೆ ಮಾಡಲಾಗಿದೆ. ಈ ಪೈಕಿ ಹಲವು ಶಾಲೆಗಳಲ್ಲಿನ ಸಮಿತಿ ಕಾರ್ಯಚಟುವಟಿಕೆ ಅತ್ಯುತ್ತಮವಾಗಿದೆ. ಇಂತಹ ಸಮಿತಿಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅದರಂತೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ 2024-25ನೇ ಸಾಲಿನ ಪುಷ್ಟಿ ಕಾರ್ಯಕ್ರಮದಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಎಸ್‌ಡಿಎಂಸಿಗಳನ್ನು ಆಯ್ಕೆ ಮಾಡಿ 1 ಲಕ್ಷ ರೂ. ಅನುದಾನ ರೂಪದ ನಗದು ಬಹುಮಾನ ನೀಡುತ್ತಿದೆ.

ನಾಲ್ಕು ಶಾಲೆಗಳಿಗೆ ಪ್ರಶಸ್ತಿ

ಮೊದಲ ವರ್ಷದ ಪ್ರಶಸ್ತಿಗೆ ಜಿಲ್ಲೆಯ 5 ತಾಲೂಕು ಹಾಗೂ ನಾಲ್ಕು ಬ್ಲಾಕ್‌ಗಳ ತಲಾ ಒಂದು ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಚನ್ನಪಟ್ಟಣ ಬ್ಲಾಕ್‌ನ ಮತ್ತಿಕೆರೆ ಶೆಟ್ಟಿ ಹಳ್ಳಿಯ ಆದರ್ಶಯ ವಿದ್ಯಾಲಯ, ಕನಕಪುರ ತಾಲೂಕಿನ ಚಿಕ್ಕ ಮುದವಾಡಿಯ ಸರ್ಕಾರಿ ಪ್ರೌಢಶಾಲೆ, ಮಾಗಡಿಯ ಹುಲಿಕಲ್ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ, ರಾಮನಗರದ ಹಿರಿಯ ಪ್ರಾಥಮಿಕ ಶಾಲೆ ಜಾಲಮಂಗಲ ಶಾಲೆಗಳು ಆಯ್ಕೆಯಾಗಿವೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಪುಷ್ಟಿ ಕಾರ್ಯಕ್ರಮದಡಿ ಅತ್ಯುತ್ತಮ ಎಸ್‌ಡಿಎಂಸಿಗಳನ್ನು ಆಯ್ಕೆ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಯಿಂದ ಎಲ್ಲ ಸರ್ಕಾರಿ ಶಾಲೆಯಿಂದ ಅರ್ಜಿ ಸಲ್ಲಿಕೆಯಾಗಿದ್ದವು. ಈ ಬಗ್ಗೆ ಪರಿಶೀಲನೆ ಮೂರು ಹಂತದಲ್ಲಿ ತಂಡ ನಿಯೋಜಿಸಲಾಗಿತ್ತು. ಅದರಂತೆ ಮೊದಲು ಬಿಆರ್‌ಸಿ, ಸಿಆರ್‌ಸಿ ಪರಿಶೀಲಿಸಿದ್ದಾರೆ. ತಾಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಹಂತದಲ್ಲಿ ಡಯಟ್ ಪ್ರಾಂಶುಪಾಲರು ಮೌಲ್ಯಮಾಪನ ಮಾಡಿ ನಡೆಸಿ ರಾಜ್ಯದ ಹಂತಕ್ಕೆ ಕಳುಹಿಸಿಕೊಟ್ಟಿದ್ದಾರೆ. ರಾಜ್ಯಮಟ್ಟದಲ್ಲಿ ಅಂತಿಮವಾಗಿ ಪ್ರತಿ ಬ್ಲಾಕ್‌ಗೆ ಒಂದು ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಆಯ್ಕೆ ಮಾಡಿ ಹೆಸರು ೋಷಣೆ ಮಾಡಲಾಗಿದೆ.

ಶಾಲೆಯಲ್ಲಿ ಬಿಸಿಯೂಟದ ಗುಣಮಟ್ಟ ಪರಿಶೀಲನೆ, ಗೈರಾದ ಮಕ್ಕಳನ್ನು ಮರಳಿ ಶಾಲೆಗೆ ಬರುವಂತೆ ಮಾಡಲು ನೆರವಾಗುವುದು, ಶಾಲಾ ಶೈಕ್ಷಣಿಕ ಪ್ರವಾಸದ ಜವಾಬ್ದಾರಿ, ಗುಣಾತ್ಮಕ ಶಿಕ್ಷಣ, ರಾಷ್ಟ್ರೀಯ ಹಬ್ಬಗಳಲ್ಲಿ ಪಾಲ್ಗೊಳ್ಳುವಿಕೆ, ಮಕ್ಕಳ ಕಲಿಕೆಗೆ ಪೂರಕ ಸಹಕಾರ ಒದಗಿಸುವುದು, ಪಾಲಕರ ಸಭೆ, ಶಿಕ್ಷಕರ ಸಭೆ, ಸಮುದಾಯದತ್ತ ಶಾಲೆಯಲ್ಲಿ ಭಾಗವಹಿಸುವುದು, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ನೆರವಾಗುವುದು, ಕ್ರೀಡಾಕೂಟ, ಪ್ರತಿಭಾ ಕಾರಂಜಿ ಇನ್ನಿತರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು, ಸಂಪನ್ಮೂಲಗಳ ಕ್ರೋಡೀಕರಣದ ಮೂಲಕ ಶಾಲೆಗೆ ಅಗತ್ಯವಿರುವ ಉಪಕರಣ ನೀಡುವುದು, ಶಾಲಾ ಭೌತಿಕ ವಾತಾವರಣ ಉತ್ತಮಗೊಳಿಸುವುದು, ದಾನಿಗಳು, ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ಶಾಲೆ ಅಭಿವೃದ್ಧಿ ಪಡಿಸುವುದು ಇನ್ನಿತರೆ ಮಾನದಂಡಗಳನ್ನು ಆಧರಿಸಿ ಎಸ್‌ಡಿಎಂಸಿ ಆಯ್ಕೆ ಮಾಡಲಾಗಿದೆ.

ಯಾವುದಕ್ಕೆ ಹಣದ ಬಳಕೆ?

ಪುಷ್ಠಿ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಎಸ್‌ಡಿಎಂಸಿಗಳ ಖಾತೆಗೆ ಈಗಾಗಲೇ ತಲಾ 1 ಲಕ್ಷ ರೂ. ಅನುದಾನ ಜಮೆಯಾಗಿದೆ. ಈ ಹಣವನ್ನು ಶಾಲೆಯ ಶೈಕ್ಷಣಿಕ ಚಟುವಟಿಕೆ, ಮೂಲ ಸೌಕರ್ಯವಾದ ಗ್ರಂಥಾಲಯ, ಗಣಕಯಂತ್ರ, ಸ್ಮಾರ್ಟ್ ಬೋರ್ಡ್, ವಿಷಯಾಧಾರಿತ ಇ-ಕಂಟೆಂಟ್, ಕ್ರೀಡಾ ಸಾಮಗ್ರಿ, ಗ್ರೀನ್‌ಬೋರ್ಡ್, ಪ್ರಯೋಗಾಲಯ, ಇಕೋ ಕ್ಲಬ್ ಚಟುವಟಿಕೆ, ಕಲಿಕಾ ಮೇಳ, ಉದ್ಯೋಗ ಮೇಳ, ಇಂಟರ್‌ನೆಟ್ ಸೌಲಭ್ಯ, ಯುಪಿಎಸ್, ಸಿಸಿ ಕ್ಯಾಮರಾ ಮತ್ತು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವ ಚಟುವಟಿಕೆಗೆ ಬಳಸಿಕೊಳ್ಳಬೇಕು. ಈ ಬಗ್ಗೆ ಎಸ್‌ಎಂಡಿಸಿ ಸಭೆ ನಡೆಸಿ ನಿರ್ಣಯ ಕೈಗೊಂಡು ಕ್ರಿಯಾಯೋಜನೆ ಸಿದ್ಧಪಡಿಸಿ ಬಿಇಒ ಅನುಮೋದನೆ ಪಡೆದು ನಿಯಾಮಾನುಸಾರ ಅನುದಾನ ಬಳಕೆ ಮಾಡಿ ದಾಖಲೆ ಮತ್ತು ವೆಚ್ಚದ ಮಾಹಿತಿ ಒದಗಿಸಬೇಕು.

ಪುಷ್ಠಿ ಪ್ರಶಸ್ತಿಗೆ ಆಯ್ಕೆಯಾಗಿರುವ ಅತ್ಯುತ್ತಮ ಎಸ್‌ಡಿಎಂಸಿ ‘ಭೇಟಿ ಹಾಗೂ ಶಾಲೆಗಳಲ್ಲಾಗಿರುವ ಅಭಿವೃದ್ಧಿ ಕಾರ್ಯ ವೀಕ್ಷಣೆ ಮಾಡಲು ಬೇರೆ ಎಸ್‌ಎಂಡಿಸಿಗಳು ಉತ್ಸುಕತೆ ತೋರುತ್ತಿವೆ. ಅದರಂತೆ ಈಗಾಗಲೇ ಕೆಲವರು ಪ್ರಶಸ್ತಿ ಪುರಸ್ಕೃತ ಶಾಲೆಗೆ ‘ಭೇಟಿ ಕೊಟ್ಟು ಮಾಹಿತಿ ಪಡೆದುಕೊಂಡಿದ್ದಾರೆ. ಎಸ್‌ಡಿಎಂಸಿ ಸಮಿತಿಯಲ್ಲಿ  18 ಜನ ಪಾಲಕರು, ಪದ ನಿಮಿತ್ತ ಸದಸ್ಯರಾದ ಮುಖ್ಯಶಿಕ್ಷಕ( ಕಾರ್ಯದರ್ಶಿ), ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಸಹಾಯಕಿ, ನಾಮನಿರ್ದೇಶಕ ಸದಸ್ಯರಾದ ನಗರಸಭೆ  ಸದಸ್ಯರು, ಹಿರಿಯ ಶಿಕ್ಷಕ, ವಿದ್ಯಾರ್ಥಿ ಇರಲಿದ್ದಾರೆ. ಮೊದಲು ಈ ಸಮಿತಿಗೆ ಶಾಸಕರು ಅಧ್ಯಕ್ಷರಾಗಿದ್ದರು. ಆದರೆ ಮಾನದಂಡ ಬದಲಿಸಿದ ನಂತರ ಮಕ್ಕಳ ಪಾಲಕರಿಗೆ ಅಧಿಕಾರ ನೀಡಲಾಗಿದೆ. ಎಸ್‌ಎಂಡಿಸಿ ಸಮಿತಿ ರಚನೆಗೆ 2006ರಲ್ಲಿ ಅಧಿಸೂಚನೆ ಹೊರಡಿಸಲಾಯಿತು. 2012ರಲ್ಲಿ ನಿಯಮ ಬದಲಾಯಿಸಲಾಯಿತು.

ಎಸ್‌ಡಿಎಂಸಿಗಳು ಶಾಲೆಗಳ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ಪುಷ್ಟಿ ಯೋಜನೆಯಡಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸದ ವಿಚಾರ. ಉಮೇಶ್ ಗಂಗವಾಡಿ, ರಾಜ್ಯ ಅಧ್ಯಕ್ಷ  ಎಸ್‌ಡಿಎಂಸಿ ಸಮನ್ವಯ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net