ಮಕ್ಕಳ ಡ್ರಾಪ್ ಔಟ್‌ಗೆ ಬ್ರೇಕ್ ಹಾಕಬೇಕು ಎಂದ ರಾಜ್ಯಪಾಲ ಗೆಹಲೋತ್

VV_Governor
Published on

ತುಮಕೂರು: ಶಾಲೆ, ಕಾಲೇಜುಗಳಲ್ಲಿ ಡ್ರಾಪ್ ಔಟ್ ಸಮಸ್ಯೆಯನ್ನು ತಡೆಯಲು ಎಲ್ಲರೂ ಪ್ರಯತ್ನಿಸಬೇಕು, ಉನ್ನತ ಶಿಕ್ಷಣ ಪಡೆದ ಮಕ್ಕಳು ದೇಶದ ಆಸ್ತಿಯಾಗಬೇಕು ಎಂದು ವಿವಿ ಕುಲಾಧಿಪತಿಗಳಾದ, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಕರೆ ನೀಡಿದರು.

ಸೋಮವಾರ ತುಮಕೂರು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕಾದರೆ, ಮೊದಲಿಗೆ ಡ್ರಾಪ್‌ಔಟ್ ಸಮಸ್ಯೆಯನ್ನು ಬಗೆಹರಿಸಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಲು ಪ್ರಯತ್ನಿಸಬೇಕು ಹಾಗೂ ಆದಷ್ಟು ಉತ್ತಮ ಶಿಕ್ಷಣ ಪಡೆಯಲು ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯ ಬಹಳ ಪುರಾತನವಾಗಿದೆ, ನಾವು ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವಶಾಂತಿಗಾಗಿ ಶ್ರಮಿಸುತ್ತೇವೆ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಶಿಕ್ಷಣ ನೀಡುತ್ತದೆ. ಪ್ರಾಚೀನ ಶಿಕ್ಷಣ ವ್ಯವಸ್ಥೆ ವ್ಯಕ್ತಿತ್ವ ನಿರ್ಮಾಣ, ಆಧ್ಯಾತ್ಮಿಕ ಜ್ಞಾನದ ಜತೆಗೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದೆ, ಇದರಿಂದಾಗಿ ನಾವು ವಿಶ್ವಗುರು ಎಂದು ಪರಿಗಣಿಸಲ್ಪಟ್ಟಿದ್ದೇವೆ ಮತ್ತು ನಮ್ಮ ಆರ್ಥಿಕತೆಯು ನಮ್ಮ ದೇಶವನ್ನು ಚಿನ್ನದ ಹಕ್ಕಿ ಎಂದು ಕರೆಯುವಷ್ಟು ಪ್ರಬಲವಾಗಿದೆ ಎಂದು ತಿಳಿಸಿದರು.

ಶಿಕ್ಷಣದ ಮೂಲಕ ವ್ಯಕ್ತಿತ್ವವು ರೂಪುಗೊಳ್ಳುತ್ತದೆ. ಮಾನಸಿಕ ಬೆಳವಣಿಗೆ, ಬುದ್ಧಿವಂತಿಕೆ ಬೆಳೆಯುತ್ತದೆ ಮತ್ತು ಮನುಷ್ಯ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಬಹುದು ಎಂದು ವಿವೇಕಾನಂದರು ನಂಬಿದ್ದರು. ಅವರು ಹಾದಿಯಲ್ಲಿ ನಾವು ನಡೆದರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಮುಂಬರುವ ವರ್ಷಗಳಲ್ಲಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವಲ್ಲಿ ನಾವೆಲ್ಲರೂ ಬಹಳ ಮುಖ್ಯವಾದ ಪಾತ್ರ ಹೊಂದಿದ್ದೇವೆ. ಮುಂದಿನ 25 ವರ್ಷಗಳ ಅಮೃತಕಾಲ ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರುವ ಕರ್ತವ್ಯದ ಅವಧಿಯಾಗಿದೆ. ಈ ಕರ್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ನಾವು ಪಾಲುದಾರರಾಗಬೇಕು. ಪರಿಸರ ಅಸಮತೋಲನ ಇಂದು ಗಂಭೀರ ಸಮಸ್ಯೆಯಾಗಿದೆ, ಪರಿಸರ ಸಂರಕ್ಷಣೆ ಮತ್ತು ವರ್ಧನೆ ನಮ್ಮೆಲ್ಲರ ಹೊಣೆಯಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಯ ದಿಕ್ಕಿನಲ್ಲಿ ಕೆಲಸ ಮಾಡುವ ಅವಶ್ಯಕತೆಯಿದೆ. ಇದಕ್ಕೆ ಯುವಜನತೆ ಕೈಜೋಡಿಸಬೇಕು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ ಮಾತನಾಡಿ, ಈ ಬಾರಿಯ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೆ ಹೆಚ್ಚಿನ ಚಿನ್ನದ ಪದಕ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಪೋಷಕರು ಆ ವಿದ್ಯಾರ್ಥಿನಿಯರ ಶಿಕ್ಷಣವನ್ನು ಇಲ್ಲಿಗೆ ನಿಲ್ಲಿಸದೆ ಮುಂದುವರೆಸಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡಿದ್ದಲ್ಲಿ ಒಂದು ವಿಷಯದ ಬಗ್ಗೆ ಅಳವಾಗಿ ಅಧ್ಯಯನ ಮಾಡುವುದರ ಜತೆಗೆ ಸಂಶೋಧನೆಯಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವ ನಹೀದಾ ಜಮ್‌ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್ ಮತ್ತಿತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net