ರಾಜ್ಯ ಸರ್ಕಾರದ ಬಗ್ಗೆ ರಾಜ್ಯಪಾಲರು ಗುಣಗಾನ:ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶಂಸೆ

Governor
Published on

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಸಮಾನತೆಯಿಂದ ಸಾಮಾಜಿಕ, ಆರ್ಥಿಕ ನ್ಯಾಯದ ಆಶಯಗಳಿಗೆ ಆಗುತ್ತಿರುವ ಹಿನ್ನೆಡೆ ಮತ್ತು ಜನರ ಸಂಕಷ್ಟ ಅರಿತುಕೊಂಡು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ದೇಶಾದ್ಯಂತ ಗಮನ ಸೆಳೆದಿವೆ ಎಂದು ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ಗುಣಗಾನ ಮಾಡಿದರು.

ಶಾಲಾ ಶಿಕ್ಷಣ ಇಲಾಖೆ,ಬಿಬಿಎಂಪಿ ಸಹಯೋಗದಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತ, ಭಾನುವಾರ ಮಾಣಿಕ್​ ಷಾ ಪೆರೇಡ್​ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನ' ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ದಿಕ್ಸೂಚಿ ಭಾಷಣ ಮಾಡಿದರು.

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಂದ ಕೋಟ್ಯಂತರ ಕುಟುಂಬಗಳಿಗೆ ಮತ್ತು ಮಹಿಳೆಯರ ಸಬಲೀಕರಕ್ಕೆ ಅನುಕೂಲವಾಗಿದೆ.ಈ ಯೋಜನೆಗಳಿಂದ ಆರ್ಥಿಕ ಬಿಕ್ಕಟ್ಟು ಎದುರಾಗಿ ಅಭಿವೃದ್ಧಿ ಕುಂಠಿತವಾಗಲಿದೆ ಎಂಬುದನ್ನು ಸುಳ್ಳಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಸಮನಾಗಿ ನಿಭಾಯಿಸುತ್ತಾ ದೇಶದಲ್ಲೇ ಕರ್ನಾಟಕವು, ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ ಎಂದರು.ಸಿಎಂ ಸಿದ್ದರಾಮಯ್ಯ, ಬೆಂ.ನಗರ ಜಿಲ್ಲಾಧಿಕಾರಿ ಜಿ.ಜಗದೀಶ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಮತ್ತಿತರರಿದ್ದರು.

ಸಂವಿಧಾನ ನಮ್ಮನ್ನು ರಕ್ಷಿಸಲಿದೆ:"ನಾವು ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ನಮ್ಮ ರಕ್ಷಿಸುತ್ತದೆ ಎಂಬ ಅರಿವು ಅನ್ನು ಸಾರ್ವಜನಿಕರಿಗೆ ಮೂಡಿಸಬೇಕಿದೆ. ಸಂವಿಧಾನವು ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತದೆ. ಸಂವಿಧಾನವು ಸರ್ವರ ಪಾಲ್ಗೊಳ್ಳುವಿಕೆ ಮೂಲಕ ದೇಶವನ್ನು ಬೆಳೆಸುವ, ಎಲ್ಲ ನಾಗರಿಕರ ಸಮೃದ್ಧಿಯನ್ನು ಖಾತ್ರಿಪಡಿಸುವ ಕಂಕಣಬದ್ಧವಾಗಿದೆ ಎಂದು ಥಾವರ್​ಚಂದ್​ ಗೆಹಲೋತ್​ ಹೇಳಿದರು. ಸಂವಿಧಾನದ ಮಹತ್ತರ ಆಶಯವಾದ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ನೆಲೆಗೊಳಿಸಲು ಕರ್ನಾಟಕವು ಶಕ್ತಿಮೀರಿ ಶ್ರಮಿಸುತ್ತಿದೆ. ನಮ್ಮ ಸರ್ಕಾರ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಾ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಒಕ್ಕೂಟದ ಧರ್ಮಕ್ಕೆ ಚ್ಯುತಿಯಾದಾಗ ತನ್ನ ಸಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದೆ. ನಾವೆಲ್ಲರೂ ಒಟ್ಟಾಗಿ ಸಂವಿಧಾನ, ಸಹಕಾರಿ ಒಕ್ಕೂಟ ವ್ಯವಸ್ಥೆ ಮೇಲಿನ ವಿಶ್ವಾಸವನ್ನು ಗಟ್ಟಿಗೊಳಿಸೋಣ ಎಂದು ರಾಜ್ಯಪಾಲರು ಕರೆ ನೀಡಿದರು. ರಾಷ್ಟ್ರದ ಏಕತೆ, ಸಮಾನತೆ,ಸಮೃದ್ಧಿಯನ್ನು ಸಾಧಿಸುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮ್ಮ ಹಾದಿಗೆ ಮಾರ್ಗದರ್ಶನ ನೀಡುತ್ತಲೇ ಇರಲಿ. ದೇಶಭಕ್ತಿ ಮತ್ತು ಏಕತೆಯ ಮನೋಭಾವವು ರಾಷ್ಟ್ರದ ಒಳಿತಿಗೆ ಕೊಡುಗೆ ನೀಡಲಿ. ಸುಭದ್ರ ಸೌಹಾರ್ಧ ಹಾಗೂ ಸಮೃದ್ಧ ಕರ್ನಾಟಕ, ಭಾರತವನ್ನು ನಿರ್ಮಿಸಲು ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಮುನ್ನಡೆಯೋಣ. ಮಾದರಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಗೊಳಿಸೋಣ ಎಂದರು.

ಆದಾಯ ಸಂಗ್ರಹದಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ: 2024-25ರಲ್ಲಿ ಹಣಕಾಸು ವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಿರುವ ರಾಜ್ಯ ಸರ್ಕಾರ, ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ. 2024ರ ಡಿಸೆಂಬರ್​ ವೇಳೆಗೆ 1,81,908 ಆದಾಯ ಸಂಗ್ರಹವಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.13 ಬೆಳವಣಿಗೆ ಸಾಧಿಸಿಕೊಂಡು ಬಂದಿದೆ. ಜಿಎಸ್​ಟಿ ಸಂಗ್ರಹದಲ್ಲಿ ಕರ್ನಾಟಕ, ದೇಶದಲ್ಲಿ 2ನೇ ಸ್ಥಾನದಲ್ಲಿದೆ ಎಂದು ರಾಜ್ಯಪಾಲರು ಹರ್ಷವ್ಯಕ್ತಪಡಿಸಿದರು. ನಮ್ಮ ಸರ್ಕಾರ ನಾಡಿಗೆ ಸಮಗ್ರ ಅಭಿವೃದ್ಧಿಗೆ ಮುಂದಾಗಿದೆ. ಆರೋಗ್ಯ, ವಿದ್ಯುತ್​, ಶಿಕ್ಷಣ, ರಸ್ತೆ ಸೇರಿ ಮುಂತಾದ ಮೂಲಸೌಕರ್ಯ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ರಾಜ್ಯಪಾಲರು ವಿವರಿಸಿದರು.

2029ಕ್ಕೆ ಮೆಟ್ರೋ ಪೂರ್ಣ: ಬೆಂಗಳೂರು ಮೆಟ್ರೋ ಯೋಜಿತ ಕಾಮಗಾರಿಗಳನ್ನು 2029ರ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ರಾಜ್ಯಪಾಲರು ತಿಳಿಸಿದರು. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ&2ಎ ಸೆಂಟ್ರಲ್​ ಸಿಲ್ಕ್​ ಬೋರ್ಡ್​ನಿಂದ ಕೃಷ್ಣರಾಜಪುರದವರೆಗೆ 19.75 ಕಿ.ಮೀ., ಹಂತ 2ಬಿ ಕೆ.ಆರ್​.ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 38.44 ಕಿ.ಮೀ.ಉದ್ದವನ್ನು 14,788 ಕೋಟಿ ರೂ.ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಹಂತ&3 ಕಾರಿಡಾರ್​&1 ಕೆಂಪಾಪುರದಿಂದ ಜೆ.ಪಿ.ನಗರ 4ನೇ ಹಂತದವರೆಗೆ 32.15 ಕಿ.ಮೀ, ಕಾರಿಡಾರ್​&2 ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.50 ಕಿ.ಮೀ.ಒಟ್ಟು 44.65 ಕಿ.ಮೀ ಉದ್ದದ 15,611 ಕೋಟಿ ಅಂದಾಜು ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಎಲ್ಲ ಯೋಜನೆಗಳನ್ನು 2029 ಡಿಸೆಂಬರ್​ ವೇಳಗೆ ಪೂರ್ಣಗೊಳ್ಳಲಿದೆ ಎಂದು ರಾಜ್ಯಪಾಲರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net