ಕೇಂದ್ರದಿಂದ ಕಡಿಮೆ ದರಕ್ಕೆ ಅಕ್ಕಿ:ಪ್ರತಿ ಕೆಜಿಗೆ 22.50 ರೂ.ನಿಗದಿ

FCI
Published on

ಹರೀಶ್​ ಬೇಲೂರು ಬೆಂಗಳೂರು

ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ಅಕ್ಕಿ ಮಾರಾಟ ಮಾಡಲು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಮುಂದಾಗಿದೆ.

ಭಾರತೀಯ ಆಹಾರ ನಿಗಮ (ಎಫ್​​ಸಿಐ)ದ ಮೂಲಕ ಕೇಂದ್ರವು, ರಾಜ್ಯ ಸರ್ಕಾರಗಳಿಗೆ, ಸರ್ಕಾರದ ಅಧೀನದ ನಿಗಮಗಳಿಗೆ ಮತ್ತು ಎಥೆನಾಲ್​ ಉತ್ಪಾದಿಸುವ ಡಿಸ್ಟಿಲರಿಗಳಿಗೆ ಪ್ರತಿ ಕೆಜಿಗೆ 22 ರೂ.50 ಪೈಸೆಯಂತೆ ಅಕ್ಕಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿದೆ. ಇ-ಹರಾಜಿನಲ್ಲಿ ಭಾಗಿಯಾಗದೆ ನೇರವಾಗಿ ಎಫ್​​​​​​ಸಿಐನಲ್ಲಿ ಖರೀದಿಸುವ ಅವಕಾಶ ಕೊಡಲಾಗಿದೆ.

ಹಿಂದೆ ಪ್ರತಿ ಕೆಜಿಗೆ 28 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು. ಆದರೆ, 2024ರ ಜೂನ್​ನಿಂದ 2024ರ ಡಿಸೆಂಬರ್​ವರೆಗೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಗಣನೀಯವಾಗಿ ಅಕ್ಕಿ ಹಾಗೂ ಗೋಧಿ ಉತ್ಪಾದನೆ ಹೆಚ್ಚಳ ಹಾಗೂ ದೇಶಾದ್ಯಂತ 556 ಲಕ್ಷ ಮೆಟ್ರಿಕ್​ ಟನ್​ ಅಕ್ಕಿ ದಾಸ್ತಾನು ಇರುವ ಕಾರಣ ಪ್ರತಿ ಕೆಜಿಗೆ 5 ರೂ.50 ಪೈಸೆ ಇಳಿಸಿ ಹೊಸ ದರದಲ್ಲಿ ಖರೀದಿಸುವ ಅವಕಾಶ ನೀಡಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್​ಎಸ್​), ಇ&ಹರಾಜು ಮೂಲಕ ವ್ಯಾಪಾರಿಗಳು, ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿ ಖಾಸಗಿಯವರು 1 ಟನ್​ನಿಂದ 5 ಸಾವಿರ ಟನ್​ವರೆಗೆ ಖರೀದಿಸಬಹುದು. 2023ರಲ್ಲಿ ಮಳೆ ಕೊರತೆಯಿಂದಾಗಿ ಆಹಾರ ಉತ್ಪಾದನೆ ಕುಸಿತವಾಗಿತ್ತು. ಹೀಗಾಗಿ, ನಿಗದಿಗಿಂತ ಹೆಚ್ಚು ಪಡಿತರ ದಾಸ್ತಾನು ಇರದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನೆಗೆ ತೊಂದರೆಯಾಗಬಹುದೆಂಬ ಕಾರಣಕ್ಕಾಗಿ ಕೇಂದ್ರ, ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್​ಎಸ್​) ಹಿಂಪಡೆದಿತ್ತು. ಆದರೆ,ಈ ಬಾರಿ ದಾಸ್ತಾನು ಇರುವ ಕಾರಣ 2024ರ ಅಕ್ಟೋಬರ್​ನಿಂದ ಒಎಂಎಸ್​ಎಸ್​ ಯೋಜನೆ ಮರು ಜಾರಿಗೆ ಬಂದಿದೆ.

ಗರೀಬ್​ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಅಕ್ಕಿ: ಕಳೆದ ವರ್ಷದಿಂದ ಉಚಿತ ಅಕ್ಕಿ ವಿತರಣೆ ಯೋಜನೆ ಜವಾಬ್ದಾರಿಯನ್ನು ಕೇಂದ್ರ ವಹಿಸಿಕೊಂಡಿದೆ. ಅದರಂತೆ, ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಅನ್ನ ಯೋಜನೆಯಡಿ ಪ್ರತಿ ತಿಂಗಳು ರಾಜ್ಯದ 1.02 ಕೋಟಿ ಬಿಪಿಎಲ್​ ಚೀಟಿಗಳಿಗೆ, 10.80 ಲಕ್ಷ ಅಂತ್ಯೋದಯ ಕಾರ್ಡ್​ಗಳಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (ಎನ್​ಎಫ್​​​​ಎಸ್​ಎ)ಗಿಂತ ಹೆಚ್ಚು ಇರುವ ಬಿಪಿಎಲ್​ ಕಾರ್ಡ್​ಗಳಿಗೆ (14,47,582), ರಾಜ್ಯ ಸರ್ಕಾರ, ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಲಾನುಭವಿಗಳಿಗೆ ಉಚಿತವಾಗಿ ವಿತರಿಸುತ್ತಿದೆ.

ಅಕ್ಕಿ ಖರೀದಿಸಿದರೆ ನೂರಾರು ಕೋಟಿ ರೂ. ಉಳಿಕೆ: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರ, 2023ರ ಜು.10ರಿಂದ ಜಾರಿಗೆ ತಂದಿದೆ. ಯೋಜನೆಯಡಿ ಬಿಪಿಎಲ್​ ಕಾರ್ಡ್​ನ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂ.ನಂತೆ 5 ಕೆಜಿ ಅಕ್ಕಿಗೆ 170 ರೂ.ನಗದನ್ನು ಖಾತೆಗೆ ಹಾಕುತ್ತಿದೆ. ಅಂತ್ಯೋದಯ ಕಾರ್ಡ್​ನಲ್ಲಿರುವ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರೂ., ಐದು ಸದಸ್ಯರಿದ್ದರೆ 510 ರೂ., ಆರು ಸದಸ್ಯರಿದ್ದರೆ 850 ರೂ. ಹಾಕಲಾಗುತ್ತಿದ್ದು, ಪ್ರತಿ ತಿಂಗಳು ಒಂದು ಕೋಟಿ ಕಾರ್ಡ್​ಗಳಿಗೆ 450&500 ಕೋಟಿ ರೂ.ಜಮೆ ಮಾಡಲಾಗುತ್ತಿದೆ. ಇದೀಗ ಕೇಂದ್ರದಿಂದ ಅಕ್ಕಿ ಖರೀದಿಸಿ ಕೊಟ್ಟರೆ ವರ್ಷಕ್ಕೆ ನೂರಾರು ಕೋಟಿ ರೂ.ಉಳಿತಾಯವಾಗಲಿದೆ.

ಇತರ ಮುಖ್ಯಾಂಶಗಳು

* ಕಮ್ಯೂನಿಟಿ ಕಿಚನ್ಸ್​ಗೆ ಪ್ರತಿ ಕೆಜಿ ಅಕ್ಕಿಯನ್ನು 22.50 ರೂ.ನಂತೆ ಮಾರಾಟ

* ಕೇಂದ್ರ ಸಹಕಾರಿ ಸಂಸ್ಥೆಗಳಾದ ನಾಫೆಡ್​, ಕೇಂದ್ರೀಯ ಭಂಡಾರ್​ಗಳಿಗೆ ಕೆಜಿ ಅಕ್ಕಿಗೆ 24 ರೂ.ನಂತೆ ಮಾರಾಟ

* ಸಣ್ಣ ಖಾಸಗಿ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ, ವ್ಯಕ್ತಿಗಳಿಗೆ ಪ್ರತಿ ಕೆಜಿಗೆ 28 ರೂ.ನಂತೆ, ಖಾಸಗಿ ವ್ಯಕ್ತಿಗಳಿಗೆ, ಸಹಕಾರಿ ಸಂಸ್ಥೆಗಳಿಗೆ, ಸಹಕಾರಿ ಒಕ್ಕೂಟಗಳಿಗೆ ಇ-ಹರಾಜಿನ ಮೂಲಕ ಕೆಜಿಗೆ 28 ರೂ.ನಂತೆ ಮಾರಾಟ

*ಹೆಚ್ಚುವರಿ ಸಾರಿಗೆ ವೆಚ್ಚ ಇಲ್ಲ

* ಅಕ್ಕಿ ಕೊರತೆಯಿರುವ ಪ್ರದೇಶಗಳಲ್ಲಿ ಇ ಹರಾಜು/ನೇರವಾಗಿ ಮಾರಾಟ

* ಭತ್ತ ಖರೀದಿ ಪ್ರದೇಶಗಳಲ್ಲಿ ನಾಫೆಡ್​, ಕೇಂದ್ರೀಯ ಭಂಡಾರ್​ನಂತಹ ಕೇಂದ್ರ ಸಹಕಾರಿ ಸಂಸ್ಥೆಗಳಿಂದ ಅಕ್ಕಿ ಮಾರಾಟಕ್ಕೆ ಅವಕಾಶ

* ಹಾಸ್ಟೆಲ್​ಗಳು, ಧಾರ್ಮಿಕ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ ಮುಂತಾದ ಸಾಂಸ್ಥಿಕ ಖರೀದಿದಾರರಿಗೆ "ಭಾರತ್​ ಬ್ರ್ಯಾಂಡ್​ ಅಕ್ಕಿ ಮಾರಾಟಕ್ಕೆ ಅವಕಾಶ

* ಖಾಸಗಿ ಕಿರಾಣಿಗಳಿಗೆ ಭಾರತ್​ ಬ್ರ್ಯಾಂಡ್​​ ಅಕ್ಕಿ ಮಾರಾಟಕ್ಕೆ ಅವಕಾಶ ಇಲ್ಲ

* ಒಎಂಸಿಯಲ್ಲಿ ನೋಂದಾಯಿತ ಎಥೆನಾಲ್​ ಡಿಸ್ಟ್ರಿಲರಿಗಳಿಗೆ ಮಾತ್ರ ಅಕ್ಕಿ ಖರೀದಿಗೆ ಅನುಮತಿ

ಮುಕ್ತ ಮಾರುಕಟ್ಟೆಯಲ್ಲಿ ಸಾಮಾನ್ಯ ಅಕ್ಕಿ ಬೆಲೆ 40-45 ರೂ. ಇದೆ. ಆದರೆ, ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗಲೆಂದು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದೆ. ನಮ್ಮ ಗೋದಾಮುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ, ಗೋಧಿ ಸಂಗ್ರಹವಿದೆ. ರಾಜ್ಯ ಸರ್ಕಾರಕ್ಕೂ ಹೆಚ್ಚುವರಿ ಅಕ್ಕಿ ವಿತರಿಸಲು ಈಗಾಗಲೇ ಸಿದ್ಧವಿದ್ದೇವೆ.

| ಬಿ.ಒ.ಮಹೇಶ್ವರಪ್ಪ, ಎಫ್​​​ಸಿಐ ಕರ್ನಾಟಕ ಶಾಖೆ ಪ್ರಧಾನ ವ್ಯವಸ್ಥಾಪಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net