

ತುಮಕೂರು: ರಾಜ್ಯಪಾಲರ ವಿರುದ್ಧ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮಾಜಿ ಶಾಸಕ ಡಿ.ಸಿ.ಗೌರಿಶಂಕರ ನೇತೃತ್ವದಲ್ಲಿ ಹೆಬ್ಬೂರಿನಲ್ಲಿ ಕೆಲಕಾಲ ರಸ್ತೆ ತಡೆದು ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ರಾಜ್ಯಪಾಲರನ್ನು ವಾಪಸ್ ದೆಹಲಿಗೆ ಕರೆಸಿಕೊಳ್ಳಿ ಎಂದು ಪ್ರತಿಭಟನಾನಿರತರಿಂದ ಆಗ್ರಹ ಕೇಳಿಬಂತು.
ತಾಲೂಕಿನ ಹೆಬ್ಬೂರಿನಲ್ಲಿ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗೌರಿಶಂಕರ್, ಇವತ್ತು ರಾಜ್ಯಪಾಲರು ಕೊಟ್ಟಿರುವ ಪ್ರಾಸಿಕ್ಯೂಷನ ನ್ಯಾಯಯುತವಾಗಿಲ್ಲ. ಇದು ಕಾನೂನು ವಿರುದ್ಧ, ಸಂವಿಧಾನದ ವಿರುದ್ಧವಾಗಿದೆ.
ಹಾಗಿಗಾಗಿ ರಾಜ್ಯಪಾಲರ ಆದೇಶದ ವಿರುದ್ಧ ಪ್ರತಿಭಟಿಸಿದ್ದೇವೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಈ ಪ್ರಕರಣಲ್ಲಿ ತಮ್ಮದೇನು ತಪ್ಪಿಲ್ಲ ಅಂತ ಮಾಹಿತಿ ಕೊಟ್ಟಿದ್ದಾರೆ. ಆದರು ಕೂಡಾ ತರಾತುರಿಯಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದು ಕಾರಣ ಏನು ಅಂತ ಅವರೇ ಹೇಳಬೇಕಾಗುತ್ತೆ. ಕೇಂದ್ರ ಸರ್ಕಾರದ ಒತ್ತಡದಿಂದ ರಾಜ್ಯಪಾಲರು ಹೀಗೆ ಮಾಡಿದ್ದು ಕೇಂದ್ರದ ಕೃಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದರು ಹರಿಹಾಯ್ದರು.
ಹೈಕೋರ್ಟ್ನಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು ನೂರರಷ್ಟು ನ್ಯಾಯಸಿಗುತ್ತೆ ಅನ್ನುವ ನಂಬಿಕೆ ಇದೆ. 1.25 ಕೋಟಿ ಕುಟುಂಬಕ್ಕೆ ಸಿದ್ದರಾಮಯ್ಯ ಅನ್ನಭಾಗ್ಯ ಕೊಟ್ಟಿದ್ದಾರೆ. ವಿದ್ಯುತ್, ಬಸ್ ಉಚಿತವಾಗಿ ಕೊಟ್ಟಿದ್ದಾರೆ. ಅಂತಹ ಒಬ್ಬ ನಾಯಕನಿಗೆ ಈ ರೀತಿಯಾಗಿ ಮಾಡುವುದು ತಪ್ಪಲ್ಲವೇ. ಪಕ್ಷಪಾತಿ ರಾಜ್ಯಪಾಲರನ್ನು ಕೂಡಲೇ ಕರೆಸಿಕೊಳ್ಳುವಂತೆ ನಾವು ರಾಷ್ಟ್ರಪತಿಯರಿಗೆ ಮನವಿ ಕೊಡುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕಲ್ಲಹಳ್ಳಿ ದೇವರಾಜ್, ಜಿ.ಪಾಲನೇತ್ರಯ್ಯ, ಕೋಡಿಮುದ್ದಹನಹಳ್ಳಿ ಪ್ರಕಾಶ್, ನರುಗನಹಳ್ಳಿ ವಿಜಯಕುಮಾರ್, ನರಸಾಪುರ ಹರೀಶ್, ಸುವರ್ಣಗಿರಿಕುಮಾರ್, ಹರಳೂರು ಪ್ರಕಾಶ್, ಗೌರಮ್ಮ, ನಾಗರತ್ನ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ರಾಷ್ಟ್ರಪತಿಗೆ ಮನವಿ
ಹೆಬ್ಬೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಬಳಿಕ ಬೈಕ್ ರ್ಯಾಲಿಯನ್ನು ಜಿಲ್ಲಾಕೇಂದ್ರ ತುಮಕೂರಿನವರೆಗೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕಚೇರಿವರೆಗೆ ಗೌರಿಶಂಕರ್ ನೇತೃತ್ವದಲ್ಲಿ ಬೈಕ್ಗಳಲ್ಲಿ ಆಗಮಿಸಿದ ಪ್ರತಿಭಟನಾಕಾರರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿರುವ ರಾಜ್ಯಪಾಲರ ಥಾವರ್ ಚಂದ್ ಗೆಹಲೋತ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿ ಕಚೇರಿ ಮೂಲಕ ಮನವಿ ಸಲ್ಲಿಸಿದರು.
ದೇವರಂತಹ ಮನುಷ್ಯ
ರಾಜಕೀಯಕ್ಕೋಸ್ಕರ ರಾಜ್ಯಪಾಲರು ಸಂವಿಧಾನದ ವಿರುದ್ಧವಾಗಿ ಪ್ರಾಸಿಕ್ಯೂಷನ ಅನುಮತಿ ಕೊಟ್ಟಿದ್ದಾರೆ. ಇದರಲ್ಲಿ ಸಿದ್ದರಾಯನವರ ಪಾತ್ರ ಏನು ಇಲ್ಲ ಅನ್ನುವುದು ಶಾಲಾ ಮಕ್ಕಳಿಗು ಗೊತ್ತಾಗುತ್ತೆ. ಸಿದ್ದರಾಮಯ್ಯ ಯಾವುದಕ್ಕು ಆಸೆ ಪಟ್ಟವರಲ್ಲ. ಹಣ ಆಸ್ತಿ ಐಶ್ವರ್ಯಕ್ಕೆ ಆಸೆ ಪಟ್ಟಿದ್ದರೆ ಎಷ್ಟು ಬೇಕಿದ್ದರು ಮಾಡಬಹುದಿತ್ತು. ಆದರೆ ಅವರು ಎಂದೂ ಮಾಡಲಿಲ್ಲ. ಅವರು ಜನನಾಯಕರು. ಕೇವಲ ಅಹಿಂದ ಸಮಾಜಕ್ಕಲ್ಲ ಎಲ್ಲ ಸಮುದಾಯಕ್ಕು ನ್ಯಾಯಕೊಡುವಂತಹ ನಾಯಕರು. ಅವರು ದೇವರಂತ ಮನುಷ್ಯ. ಎಲ್ಲೋ ಒಂದು ಕಡೆ ಅವರಿಗೆ ಅನ್ಯಾಯ ಆಗುತ್ತಿದೆ. ಹಾಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮಾಜಿ ಶಾಸಕ ಗೌರಿಶಂಕರ್ ಹೇಳಿದರು.