

ನಂಜನಗೂಡು: ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಶ್ವಕರ್ಮ ಜನಾಂಗವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ ಕಡೆಗಣಿಸುತ್ತಿದೆ ಎಂದು ವಿಶ್ವಕರ್ಮ ಸಂಘದ ಅಧ್ಯಕ್ಷ ಚಂದ್ರು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿಶ್ವಕರ್ಮ ಜನಾಂಗದ ವತಿಯಿಂದ ತಾಲೂಕು ಆಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಜನರು ಯಾವಾಗಲೂ ಶಾಂತಿಪ್ರಿಯರು. ಶಾಂತಿ ಮಂತ್ರದ ಮೂಲಕ ಹಕ್ಕುಗಳನ್ನು ಕೇಳಿದರೆ ತಾಲೂಕು ಆಡಳಿತ ನೀಡುತ್ತಿಲ್ಲ. ಇದು ಹೀಗೆ ಮುಂದುವರಿದರೆ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಸಮಾಜದ ಜನರು ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಯಾವುದೇ ಸ್ಥಾನಮಾನಗಳು ಸರಿಯಾದ ರೀತಿಯಲ್ಲಿ ದೊರಕುತ್ತಿಲ್ಲ ಎಂದರು.
ಶಾಸಕರು ಹಾಗೂ ತಹಸೀಲ್ದಾರ್ ಗೈರು: ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಹಾಗೂ ತಹಸೀಲ್ದಾರ್ ಗೈರಾಗಿದ್ದರು. ಈ ಬಗ್ಗೆ ಸಮಾಜದ ಜನರು ಬೇಸರ ವ್ಯಕ್ತಪಡಿಸಿದರು. ಜತೆಗೆ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಅರ್ಥಪೂರ್ಣವಾಗಿ ಜಯಂತಿ ಆಚರಿಸದೆ ಸರ್ಕಾರದ ಹಣ ಪೋಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳು ಹಾಗೂ ಮುಖಂಡರನ್ನು ಗೌರವಿಸಲಾಯಿತು. ಅಧಿಕಾರಿಗಳಾದ ರಾಜು ಮಹದೇವ ಪ್ರಸಾದ್, ವಿರೂಪಾಕ್ಷ, ಎಚ್.ಬಿ.ಪುಟ್ಟಣ್ಣ, ವಿನಯ್, ರಮೇಶ್, ಗುರುಸ್ವಾಮಿ, ಅಳಗಂಚಿ ನಂಜುಂಡಾಚಾರ್, ಗೋಳೂರು ಸ್ನೇಕ್ ಬಸವರಾಜ್, ಹೆಡತಲೆ ನಾಗಣ್ಣ, ಶ್ಯಾಮ್ ಸುಂದರ್, ಅನಿಲ್ ಕುಮಾರ್, ಶೇಖರಣ್ಣ, ಪ್ರಕಾಶ್, ಸಿಂಧುವಳ್ಳಿ ಗಿರೀಶ್, ನಂಜುಂಡಸ್ವಾಮಿ, ಪ್ರಭುಸ್ವಾಮಿ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು ಹಾಜರಿದ್ದರು.