ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಒತ್ತು

FotoJet (1)
Published on

ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿಕೆ | ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಬಾಗೇಪಲ್ಲಿ : ಸರ್ಕಾರದ ಎಲ್ಲ ಅನುದಾನಗಳನ್ನು ಹಾಸನ ಜಿಲ್ಲೆಯ ಒಂದು ಕುಟುಂಬ ಸ್ವಂತ ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಬಳಿಸಿಕೊಂಡು ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದಲ್ಲೇ ಮೂರು ಪಾಲಿಟೆಕ್ನಿಕ್‌ಗಳನ್ನು ಆರಂಭಿಸಿದೆ. ಆದರೆ, ಕಾಂಗ್ರೆಸ್ ಸರ್ಕಾರ ಎಲ್ಲ ಕ್ಷೇತ್ರಗಳ ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ದ ಸಚಿವ ಡಾ.ಎಂ.ಸಿ.ಸುಧಾಕರ್ ಪರೋಕ್ಷವಾಗಿ ಗುಡುಗಿದರು.

ಪಟ್ಟಣ ವ್ಯಾಪ್ತಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಪ್ರಥಮ ದರ್ಜೆ ಕಾಲೇಜುನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಎಲ್ಲ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡಿದೆ. ಈ ಸಮಯದಲ್ಲಿ ನಾನು ಉನ್ನತ ಶಿಕ್ಷಣ ಸಚಿವನಾಗಿರುವುದು ಸೌಭಾಗ್ಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಐದು ತಾಲೂಕುಗಳ ಶೈಕ್ಷಣಿಕ ಅಭಿವೃದ್ದಿಗೆ ಆಗತ್ಯ ಸೌಲಭ್ಯಗಳನ್ನು ಸರ್ಕಾರ ಪೂರೈಸುತ್ತಿದೆ. ಅನುದಾನ ಇಲ್ಲದಿದ್ದರೆ ಬಾಗೇಪಲ್ಲಿ ಕ್ಷೇತ್ರವೊಂದಕ್ಕೇ 21 ಕೋಟಿ ರೂ. ಕೊಟ್ಟಿದ್ದು ಯಾರು ಎಂದು ವಿರೋಧ ಪಕ್ಷವನ್ನು ಪ್ರಶ್ನಿಸಿದರು. ಸರ್ಕಾರದಲ್ಲಿ ಅನುದಾನ ಇಲ್ಲ ಎನ್ನುವುದು ವಿರೋಧ ಪಕ್ಷಗಳ ಅಪಪ್ರಚಾರವಷ್ಟೇ ಎಂದರು.

ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಬಯಸುವ ವಿದ್ಯಾರ್ಥಿಗಳು ಕನ್ನಡ ಭಾಷೆಯ ಜತೆಗೆ ಇಂಗ್ಲಿಷ್ ಕಲಿಯಬೆಕಿದೆ. ಕನ್ನಡ ಜ್ಞಾನದ ಜತೆಗೆ ವ್ಯವಹರಿಸಲು ಇಂಗ್ಲಿಷ್ ಕಲಿಯಬೇಕೆಂದು ಸಚಿವರು ಕಿವಿಮಾತು ಹೇಳಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಸರ್ಕಾರ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲೂಕುಗಳ ಶೈಕ್ಷಣಿಕ ಅಭಿವೃದ್ದಿಗಾಗಿ 21 ಕೋಟಿ ರೂ. ಅನುದಾನ ನೀಡಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮತ್ತಷ್ಟು ಸೌಲಭ್ಯಗಳು ಬೇಕಿದ್ದು, ಅವುಗಳನ್ನು ಮಂಜೂರು ಮಾಡಿಕೊಡಬೇಕಾಗಿದೆ, ಜತೆಗೆ ಕೈಗಾರಿಕೆ, ನೀರಾವರಿ ಯೋಜನೆಗಳ ಅಭಿವೃದ್ಧಿ ಬಗ್ಗೆ ಸರ್ಕಾರದ ಜತೆ ಚರ್ಚಿಸಿ ಕ್ಷೇತ್ರದ ಅಭಿವೃದ್ದಿಗೆ ಸಚಿವರು ಸಹಕಾರ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ, ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಾ ನರಸಿಂಹನಾಯ್ಡು, ಗ್ರಾಪಂ ಅಧ್ಯಕ್ಷ ಎಚ್.ಎಸ್.ನವೀನ್, ಮುಖಂಡರಾದ ಎಸ್.ಎಸ್.ರಮೇಶ್ ಬಾಬು, ಬಿ.ವಿ.ವೆಂಕಟರವಣ, ಎ.ವಿ.ಪೂಜಪ್ಪ, ಎಚ್.ವಿ.ನಾಗರಾಜು, ಮಲ್ಲಿಕಾರ್ಜುನರೆಡ್ಡಿ, ವಿಷ್ಟುವರ್ಧನರೆಡ್ಡಿ, ಜಯಪ್ರಕಾಶ್‌ರೆಡ್ಡಿ, ಜಯಪ್ರಕಾಶ್‌ನಾರಾಯಣ ಮತ್ತಿತರರು ಇದ್ದರು.

ಬಸ್ ಸೌಲಭ್ಯ

ಪಟ್ಟಣದ ಬಸ್ ನಿಲ್ದಾಣದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು 3 ಕಿಮೀ ದೂರದಲ್ಲಿರುವ ಕಾರಣ ವಾಹನ ಸೌಲಭ್ಯ ಇಲ್ಲ. ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಲೇಜು ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಶಾಸಕ ಸುಬ್ಬಾರೆಡ್ಡಿಗೆ ಕಾಲೇಜು ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ತಕ್ಷಣವೇ ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net