

ಗಂಗಾಧರ್ ಬೈರಾಪಟ್ಟಣ
ರಾಮನಗರ:ಶಾಲೆಗಳಲ್ಲಿ ಯಾವುದೇ ರೀತಿಯ ಸ್ವಚ್ಚತೆಗೆ ಶಾಲಾ ಮಕ್ಕಳ ಬಳಕೆ ನಿಷೇಧಿಸಿ ಸರ್ಕಾರ ಹೊರಡಿಸಿರುವ ಸುತ್ತೋಲೆ, ಶಿಕ್ಷಕ ವೃಂದವನ್ನು ಗೊಂದಲ ಮತ್ತು ಆತಂಕಕ್ಕೆ ದೂಡಿದೆ.
ಹಿಂದಿನಿಂದಲೂ ಶಾಲೆಗಳ ಸ್ವಚ್ಚತೆಗೆ ಬೇಕಾದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಲ್ಲಿ, ಇಲ್ಲವೇ ಪರ್ಯಾಯ ವ್ಯವಸ್ಥೆಯನ್ನು ಮಾಡುವಲ್ಲಿ ವಿಲವಾದ ಶಾಲಾ ಶಿಕ್ಷಣ ಇಲಾಖೆ, ಇತ್ತೀಚಿನ ಕೆಲವು ಟನೆಗಳ ಹಿನ್ನೆಲೆಯಲ್ಲಿ ಮಕ್ಕಳನ್ನು ಯಾವುದೇ ರೀತಿಯ ಸ್ವಚ್ಚತಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬಾರದು ಎನ್ನುವ ನಿರ್ದೇಶನವನ್ನು ರಾಮನಗರ ಶಾಲಾ ಶಿಕ್ಷಣ ಇಲಾಖೆ ಡಿಡಿಪಿಐ ನೀಡಿದ್ದಾರೆ.
ಆದರೆ, ಮಕ್ಕಳ ಕೈಯಲ್ಲಿ ಅವರ ಕುಳಿತುಕೊಳ್ಳುವ ಬೆಂಚು, ಮೇಜುಗಳನ್ನು ಸಹ ಸ್ವಚ್ಚತೆ ಮಾಡಿಸಬೇಕೇ?, ಬೇಡವೇ? ಎನ್ನುವ ಪ್ರಶ್ನೆ ಶಿಕ್ಷಕ ವೃಂದಲ್ಲಿ ಮೂಡಿದೆ. ಒಂದು ವೇಳೆ ಇವುಗಳ ಸ್ವಚ್ಚತೆಗೆ ಬಳಕೆ ಮಾಡಿಕೊಂಡರೆ ಮುಂದೇನಾಗುವುದೋ ಎನ್ನುವ ಭಯದಲ್ಲಿಯೇ ಕಾಲದೂಡುವಂತೆ ಮಾಡಿದೆ.
ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಡಿ ಗ್ರೂಪ್ ಸಿಬ್ಬಂದಿಯೇ ಇಲ್ಲ. ಪ್ರೌಢಶಾಲಾ ವಿಭಾಗದ ಕೆಲವು ಶಾಲೆಗಳನ್ನು ಹೊರತುಪಡಿಸಿ, ಹೆಚ್ಚಿನ ಶಾಲೆಗಳಲ್ಲಿಯೇ ಶಾಲಾ ಮಕ್ಕಳು ಮತ್ತು ಇಲ್ಲವೇ ಅದೇ ಶಾಲೆಯ ಶಿಕ್ಷಕರೇ ಡಿ ಗ್ರೂಪ್ ಕೆಲಸ ಮಾಡಬೇಕು. ಇರುವ ಡಿ ಗ್ರೂಪ್ ಸಿಬ್ಬಂದಿ ತಮ್ಮ ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಚಗೊಳಿಸುವ ಕೆಲಸಕ್ಕೆ ಇಳಿಯುವುದಿಲ್ಲ. ಇದರ ಪರಿಣಾಮವೇ ಶೌಚಾಲಯಗಳ ಸ್ವಚ್ಚತೆಗೆ ವಿದ್ಯಾರ್ಥಿಗಳ ಬಳಸುವಂತಹ ಕೃತ್ಯಗಳು ನಡೆಯಲು ಕಾರಣವಾಗಿವೆ.
ವಿದ್ಯಾರ್ಥಿಗಳನ್ನು ಸ್ವಚ್ಚತೆಗೆ ಬಳಕೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ 2023ರ ಡಿ.29ರಂದು ಆದೇಶ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆ ಕುಡಿಯವ ನೀರು ಮತ್ತು ಸ್ವಚ್ಚತಾ ವೆಚ್ಚವಾಗಿ ಅನುಧಾನವನ್ನು 2023&24ನೇ ಸಾಲಿಗೆ ಬಿಡುಗಡೆ ಮಾಡಿದೆ.
1&50 ಮಕ್ಕಳಿರುವ ಶಾಲೆಗೆ 20 ಸಾವಿರ ರೂ, 51&100 ಮಕ್ಕಳಿರುವ ಶಾಲೆಗೆ 28 ಸಾವಿರ ರೂ., 101&500 ಮಕ್ಕಳಿರುವ ಶಾಲೆಗೆ 33 ಸಾವಿರ ರೂ ಹಾಗೂ 501ಕ್ಕಿಂತ ಹೆಚ್ಚಿರುವ ಶಾಲೆಗೆ 45 ಸಾವಿರ ರೂ.ಗಳನ್ನು ಬಿಡುಗಡೆ ಮಾಡಿದೆ. ಅದರೆ ಇಂದಿನ ದಿನ ಮಾನದಲ್ಲಿ ಯಾರು 100&150 ರೂ ಕೂಲಿಗೆ ಕೆಲಸ ಮಾಡುವುದಿಲ್ಲ. ಒಮ್ಮೆ ಸ್ವಚ್ಚತೆ ಮಾಡಿದರೆ ಕನಿಷ್ಟ 500 ರೂ ನೀಡಲೇಬೇಕಿದೆ. ಇನ್ನು ವಾರದಲ್ಲಿ ಮೂರು ದಿನ ಶೌಚಾಲಯ ಸ್ವಚ್ಚತೆ ಮಾಡಿದರೆ ವಾರಕ್ಕೆ 1500 ರೂ ನಂತೆ ತಿಂಗಳಿಗೆ 6 ಸಾವಿರ ರೂ. ನೀಡಬೇಕಿದೆ ಎನ್ನುವುದು ಶಿಕ್ಷಕರ ವಾದ.
ಶಾಲಾ ಮಕ್ಕಳನ್ನು ಶೌಚಾಲಯ ಸ್ವಚ್ಚತೆ ಬಳಕೆ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ಮಕ್ಕಳ ಬಳಕೆಗೆ ನಿಷೇಧ ಹೇರುವ ಮೂಲಕ ಇದೀಗ, ಸ್ವಚ್ಚತೆ ವಿಚಾರದಲ್ಲಿ ಕಣ್ಣು ಬಿಟ್ಟಿದೆ. ಆದರೆ ಯಾವುದೇ ಸ್ಪಷ್ಟ ನಿರ್ದೇಶನ ನೀಡದೆ ಶಿಕ್ಷಕ ವೃಂದದಲ್ಲಿ ಗೊಂದಲ ನಿರ್ಮಿಸಿದೆ. ಮಕ್ಕಳನ್ನೂ ಕೈ ತೋಟ ನಿರ್ವಹಣೆ, ಶಾಲಾ ಆವರಣದಲ್ಲಿ ಬಿದ್ದಿರುವ ಕಸ, ಕೊಠಡಿಯಲ್ಲಿನ ದೂಳು ತೆಗೆಯಲು ಬಳಕೆ ಮಾಡಿಕೊಂಡರೆ ಮುಂದೇನು ಎನ್ನುವ ಆತಂಕ ಶಿಕ್ಷಕರಲ್ಲಿ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಶಾಲಾ ಶಿಕ್ಷಣ ಇಲಾಕೆ ಸ್ಪಷ್ಟ ನಿರ್ದೇಶನವನ್ನು ನೀಡಬೇಕಿದೆ.
ಸ್ಥಳಿಯ ಸಂಸ್ಥೆ ಬಳಕೆ
ಸರ್ಕಾರ ಶಾಲಾ ಆವರಣ ಮತ್ತು ಶೌಚಾಲಯಗಳ ಸ್ವಚ್ಚತೆಗೆ ಸಂಬಂಧಿಸಿದಂತೆ ಕೂಡಲೇ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಇದು ತಕ್ಷಣಕ್ಕೆ ಸಾಧ್ಯವಿಲ್ಲ ಎನ್ನುವುದಾದರೆ, ಸ್ಥಳಿಯ ಆಢಳಿತ ಸಂಸ್ಥೆಗಳ ಮೂಲಕ ಇದನ್ನು ಮಾಡಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ನಗರಸಭೆಗಳಿಗೆ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಶಾಲಾ ಆವರಣ ಮತ್ತು ಶೌಚಾಲಯಗಳ ಸ್ವಚ್ಛತೆ ಜವಾಬ್ದಾರಿಯನ್ನು ನೀಡಿದರೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದಂತೆ ಆಗುತ್ತದೆ. ಇಲ್ಲವಾದರೆ ಸರ್ಕಾರದ ಆದೇಶದ ಅನುಸಾರ ಅನೈರ್ಮಲ್ಯದ ವಾತಾವರಣದಲ್ಲಿಯೇ ಮಕ್ಕಳು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಖಚಿತ.
ಸರ್ಕಾರದ ಆದೇಶದಂತೆ ಶಾಲಾ ಆವರಣದಲ್ಲಿ ಯಾವುದೇ ಮಗುವನ್ನು ಯಾವುದೇ ಸ್ವಚ್ಚತಾ ಕಾರ್ಯಕ್ಕೆ ಬಳಕೆ ಮಾಡುವಂತಿಲ್ಲ. ಸರ್ಕಾರ ಸ್ವಚ್ಚತೆಗೆ ಬೇಕಾದ ಸಿಬ್ಬಂದಿ ಅಥವಾ ಪರ್ಯಾಯ ವ್ಯವಸ್ಥೆಯನ್ನು ಶ್ರೀವೇ ಮಾಡಲಿದೆ.
ಬಸವರಾಜೇಗೌಡ,
ಡಿಡಿಪಿಐ, ಶಾಲಾ ಶಿಕ್ಷಣ ಇಲಾಖೆ,
==
ಮಕ್ಕಳನ್ನು ಶೌಚಾಲಯ ಸ್ವಚ್ಚತೆ ಸೇರಿದಂತೆ ಇತರೆ ಸ್ವಚ್ಚತಾ ಕಾರ್ಯಕ್ಕೆ ಬಳಸಿಕೊಳ್ಳದಂತೆ ಸರ್ಕಾರ ಹೊರಡಿಸಿರುವ ಆದೇಶ ಸ್ವಾಗತಾರ್ಹ. ಆದರೆ, ಅವರ ಕುಳಿತುಕೊಳ್ಲುವ ಕೊಠಡಿಯ ಸ್ವಚ್ಚತೆ, ಶಾಲಾ ಆವರಣದ ಸ್ವಚ್ಚತೆ ಮಾಡಿಸಬಾರದೇ ಎನ್ನುವ ಗೊಂದಲ ಇದೆ. ಸರ್ಕಾರ ಕೂಡಲೇ ಸ್ವಚ್ಚತೆ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಇಲ್ಲವೇ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು.
ಸ್ವಾಮಿ. ಟಿ,
ಅಧ್ಯಕ್ಷರು, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂ
ರಾಮನಗರ ಜಿಲ್ಲೆ.