

ಬಾಗೇಪಲ್ಲಿ : ರೈತರು, ಮಹಿಳೆಯರ ಮತಗಳಿಂದ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳಿಗೆ ರೈತರು, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವ ನೈತಿಕತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀಮಂತರ ಪರವಾದ ಆಡಳಿತ ನಡೆಸಿ ಬಡವರಿಗೆ, ಕಾರ್ಮಿಕ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜು ವಾಗ್ದಾಳಿ ನಡೆಸಿದರು.
ಸಿಪಿಐ(ಎಂ)ನ 18ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಪಟ್ಟಣದ ಗೂಳೂರು ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ದೇಶದ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದರೂ ಎನ್‌ಡಿಎ ಮೈತ್ರಿಕೂಟದ ಮೂಲಕ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದು ಬಂಡವಾಳಶಾಹಿಗಳ ಪರವಾಗಿ ಅಧಿಕಾರ ನಡೆಸುತ್ತಿದೆ. ಬಿಜೆಪಿ ಸರ್ಕಾರ ಮತ್ತೆ ಹಳೇ ತಪ್ಪುಗಳನ್ನು ಮುಂದುವರಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಕರ್ನಾಟಕ ರಾಜ್ಯದ ಜನತೆ ಕೋವಿಡ್, ಅತಿವೃಷ್ಟಿ, ಅನಾವೃಷ್ಟಿಯಿಂದ ಬಳಲುತ್ತಿದ್ದು ಪರಿಹಾರ ನೀಡಬೇಕಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡದೆ, ಸಾಲದ ಮೇಲೆ ಸಾಲ ಮಾಡಿ ಬಜೆಟ್ ಮಂಡನೆ ಮಾಡಿ ಬಂಡವಾಳ ಶಾಹಿಗಳ ಪರ ಸರ್ಕಾರ ನಡೆಸುತ್ತಿದೆ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ ಬಡವರ, ಕೂಲಿ ಕಾರ್ಮಿಕರ, ರೈತರ ಪರ ನಿಲ್ಲುವ ಸಿಪಿಐ(ಎಂ) ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.
ಸಮ್ಮೇಳನದ ಅಂಗವಾಗಿ ಪಟ್ಟಣದ ಸುಂದರಯ್ಯ ಭವನದ ಮುಂಭಾಗದಿಂದ ಗೂಳೂರು ವೃತ್ತದವರೆಗೆ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು. ಮುಖಂಡರಾದ ಕೆ.ಎನ್.ಉಮೇಶ್, ಜಿ.ಸಿ.ಬಯ್ಯರೆಡ್ಡಿ, ಡಾ.ಅನಿಲ್ ಕುಮಾರ್, ಎಂ.ಪಿ.ಮುನಿವೆಂಕಟಪ್ಪ, ಎಂ.ಎನ್.ರಘುರಾಮರೆಡ್ಡಿ, ಸಾವಿತ್ರಮ್ಮ, ಚನ್ನರಾಯಪ್ಪ, ಓಬಳರಾಜು, ಜಯರಾಮರೆಡ್ಡಿ, ಕೆ.ನಾಗರಾಜು, ಸಿದ್ದಗಂಗಪ್ಪ, ವಾಲ್ಮೀಕಿ ಅಶ್ವತ್ಥಪ್ಪ, ಎಸ್‌ಎಫ್‌ಐ ಸೋಮಶೇಖರ್, ಕೃಷ್ಣಪ್ಪ, ಮುನಿಯಪ್ಪ, ದೇವಿಕುಂಟೆ ಶ್ರೀನಿವಾಸ್ ಮತ್ತಿತರರು ಇದ್ದರು.
ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿ
ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ. ರಾಘವಲು ಮಾತನಾಡಿ, ಕೈಗಾರಿಕೆ ಸ್ಥಾಪನೆ, ಕೃಷಿ ಸಮಸ್ಯೆ, ಕೂಲಿ ಕಾರ್ಮಿಕರ ನಿರುದ್ಯೋಗ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುವ ಏಕೈಕ ಪಕ್ಷ ಸಿಪಿಎಂ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ದೇಶ ಮತ್ತು ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಜನವಿರೋಧಿ ಬಿಜೆಪಿ, ಕಾಂಗ್ರೆಸ್ ಸರ್ಕಾರಗಳಿಗೆ ಬುದ್ದಿ ಕಲಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡಬೇಕಾದರೆ ಪ್ರತಿಯೊಬ್ಬರು ಸಿಪಿಎಂ ಪಕ್ಷವನ್ನು ಸಂಘಟಿಸಬೇಕಾಗಿದೆ. ದೇಶದ ಶ್ರೀಮಂತ ಉದ್ದಿಮೆಗಳ ಸಾಲ ಮನ್ನಾ ಮಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ, ರೈತರ, ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರ ಸಾಲಮನ್ನಾ ಮಾಡುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಬಗ್ಗೆ ಟೀಕೆ
ಆಂಧ್ರಪ್ರದೇಶದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಬಣ್ಣಬಣ್ಣದ ಬಟ್ಟೆ ಧರಿಸಿ ನಟನೆ ಮಾಡುತ್ತಿದ್ದ ಅಲ್ಲಿನ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಇಂದು ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಆಡಳಿತ ನಡೆಸುವುದು ಬಿಟ್ಟು ಸನಾತನ ಹಿಂದು ಧರ್ಮದ ಪ್ರಚಾರಕನಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಕೋಮುವಾದಿ ರಾಜಕಾರಣಿಗಳಿಂದ ಸಾಮಾನ್ಯ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ ಎಂದು ಪ್ರಶ್ನಿಸಿದರು.