

ಹಾಸನ: ಆರ್‌ಎಸ್‌ಎಸ್ ನಿಷೇಧಿಸಿದರೆ ರಾಜ್ಯ ಸರ್ಕಾರ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತೀಯ ಸಂಯೋಜಕ ಶರಣ್ ಪಂಪವೆಲ್ ಎಚ್ಚರಿಸಿದರು.
ಗುರುವಾರ ಹಾಸನಾಂಬ ದೇವಿ ದರ್ಶನ ಪಡೆದು ಬಳಿಕ ಆರ್‌ಎಸ್‌ಎಸ್ ನಿಷೇಧ ಕುರಿತು ಸರ್ಕಾರಕ್ಕೆ ಪತ್ರ ಬರೆದ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ ರಾಷ್ಟ್ರ ಭಕ್ತ ಸಂಘಟನೆ. ಸಯ್ವಂ ಸೇವಕರಾಗಿ ಕಾರ್ಯ ಮಾಡಿಕೊಂಡು ದೇಶ, ಧರ್ಮ ಎಂದರೆ ಏನು? ಸಮಾಜದಲ್ಲಿ ಯಾವ ರೀತಿ ಇರಬೇಕು. ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಹೇಳಿಕೊಡುತ್ತಿದೆ. ಆರ್‌ಎಸ್‌ಎಸ್ ಲಕ್ಷಾಂತರ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿ ಒಬ್ಬ ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ಮಾಡುತ್ತಿದೆ. ಆರ್‌ಎಸ್‌ಎಸ್ ಎಂದರೆ ಶಿಸ್ತು, ದೇಶ ಪ್ರೇಮ, ರಾಷ್ಟ್ರಭಕ್ತಿ, ಇಡೀ ಸಮಾಜವನ್ನು ಒಟ್ಟು ಮಾಡುವ ಸಂಘಟನೆ. ಅಸಮಾನತೆಯನ್ನು ಸರಿ ಮಾಡುವ ಕೆಲಸವನ್ನು ಆರ್‌ಎಸ್‌ಎಸ್ ಮೂಲಕ ಮಾಡಲಾಗುತ್ತಿದೆ. ದೇಶದಲ್ಲಿ ಲಕ್ಷಾಂತರ ಯುವಕರನ್ನು ಸೇರಿಸಿಕೊಂಡು ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಯಾರನ್ನೋ ಖುಷಿಪಡಿಸಲಿಕ್ಕೆ, ವೋಟ್ ಬ್ಯಾಂಕಿಗೋಸ್ಕರ ರಾಜ್ಯ ಸರ್ಕಾರ ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆ, ಸರ್ಕಾರಿ ಸ್ಥಳ, ದೇವಸ್ಥಾನ, ಧಾರ್ಮಿಕ ಸ್ಥಳಗಳಲ್ಲಿ ಅದರ ಚಟುವಟಿಕೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.
ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಬನ್ನಿ, ಚಟುವಟಿಕೆಗೆ ಬನ್ನಿ, ಆಗ ನಿಮಗೆ ಆರ್‌ಎಸ್‌ಎಸ್ ಎಂದರೆ ಏನು ಅಂಥ ಗೊತ್ತಾಗುತ್ತದೆ. ನಮ್ಮ ಕಾರ್ಯಕರ್ತರು ಮಾತ್ರವಲ್ಲ ಜನ ಸಾಮಾನ್ಯರು ಆರ್‌ಎಸ್‌ಎಸ್ ಒಪ್ಪುತ್ತಿದ್ದಾರೆ. ಯಾರನ್ನು ಬೇಕಾದರೂ ಕೇಳಿ, ಆರ್‌ಎಸ್‌ಎಸ್ ಎಂದರೆ ಏನು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಅಂತಹ ಸಂಘಟನೆಯ ಚಟುವಟಿಕೆ ನಿಷೇಧ ಮಾಡಲು ಹೊರಟಿರುವುದು ಸರಿಯಲ್ಲ. ಕರ್ನಾಟಕದ ಜನ ಇದನ್ನು ಒಪ್ಪಲ್ಲ. ನೀವೇನಾದರೂ ಆ ಹೆಜ್ಜೆಯನ್ನು ಮುಂದಿಟ್ಟರೆ ಮುಂದಿನ ಪರಿಣಾಮಗಳನ್ನು ರಾಜ್ಯ ಸರ್ಕಾರ ಎದುರಿಸಲಿದೆ ಎಂದರು.