

ಆಲೂರು: ಸರ್ಕಾರಿ ಶಾಲೆಗಳಿಗೆ ಸೇರಿದ ಜಾಗಗಳನ್ನು ಬೇರೆ ಇಲಾಖೆಗಳಿಗೆ ಅಥವಾ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲು ಬಿಡುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಬೈರಾಪುರ ಗ್ರಾಮದ ಗ್ರಾಮ ಪಂಚಾಯಿತಿ ಸಮೀಪದ ಸರ್ಕಾರಿ ಶಾಲಾ ಕಟ್ಟಡ ಶಿಥಿಲಗೊಂಡು ಪಾಳು ಬಿದ್ದಿರುವ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮುಖಂಡರು ಮನವಿ ಮಾಡಿದರು. ಅದಕ್ಕೆ ಉತ್ತರಿಸಿದ ಶಾಸಕರು, ಸರ್ಕಾರಿ ಶಾಲೆಗಳಲ್ಲಿ ಬಡವರು, ದಲಿತ ಮಕ್ಕಳೆ ಹೆಚ್ಚು ಓದುತ್ತಿರುವುದರಿಂದ ಶಾಲಾ ಜಾಗ ಉಳಿಸುವ ಜವಾಬ್ದಾರಿ ನಮ್ಮ ಕರ್ತವ್ಯ. ಸರ್ಕಾರಿ ಶಾಲಾ ಜಾಗವನ್ನು ನಾನು ಶಾಸಕನಾಗಿರುವವರೆಗೂ ಬೇರೆ ಇಲಾಖೆ ಅಥವಾ ಖಾಸಗಿ ವ್ಯಕ್ತಿಗಳ ಪಾಲಾಗಲು ಬಿಡುವುದಿಲ್ಲ ಎಂದರು.
ಆಲೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸದೆ ಸಣ್ಣ ಪುಟ್ಟ ಚಿಕಿತ್ಸೆಗಳಿಗೂ ಹಾಸನದ ಖಾಸಗಿ ಆಸ್ಪತ್ರೆಗೆ ಬರೆದು ಕೊಡುತ್ತಾರೆ. ಕಡಿಮೆ ದರದಲ್ಲಿ ಸಿಗುವ ಜನೌಷಧಿ ಅಂಗಡಿಗೆ ಬೀಗ ಹಾಕಲಾಗಿದೆ ಎಂದು ಕೆಲ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ಆರೋಗ್ಯ ಅಧಿಕಾರಿ ನಿಸಾರ್ ಫಾತಿಮಾ ಮಾತನಾಡಿ, ಈಗಾಗಲೇ ಆಸ್ಪತ್ರೆಯ ಕೆಲವು ವೈದ್ಯರ ವಿರುದ್ಧ ದೂರುಗಳು ಬಂದಿವೆ. ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇನ್ನೂ ಕೆಲವು ರೋಗಿಗಳ ಪರಿಸ್ಥಿತಿ ನೋಡಿಕೊಂಡು ಹಾಸನಕ್ಕೆ ಕಳುಹಿಸಿ ಕೊಡಲಾಗುತ್ತಿದೆ ಎಂದರು.
ಆಸ್ಪತ್ರೆ ಬಗ್ಗೆ ಸಾಕಷ್ಟು ದೂರಗಳಿದ್ದು ಹಣಕ್ಕಾಗಿ ಕೆಲವು ವೈದ್ಯರು ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಚೀಟಿ ಬರೆದು ಕೊಡಲಾಗುತ್ತಿದೆ ಈ ಬಗ್ಗೆ ನಿಗಾ ವಹಿಸಿ ಎಂದು ಶಾಸಕ ಸಿಮೆಂಟ್ ಮಂಜು ಸೂಚನೆ ನೀಡಿದರು.
ಮಗ್ಗೆ ಗ್ರಾಮದಲ್ಲಿರುವ ದೂರವಾಣಿ ಕೇಂದ್ರ ಬಳಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಜಾಗ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡಲಾಗುತ್ತಿದೆ. ಆದರೆ ಇದುವರೆಗೂ ಜಾಗವನ್ನು ಗುರಿತಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ ಎಂದು ಆಲೂರು ತಾಲೂಕಿನ ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ.ವಾಸುದೇವ್ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ತಹಸೀಲ್ದಾರ್ ಮಲ್ಲಿಕಾರ್ಜುನ್ ಅವರು, ಕೇಂದ್ರ ಸರ್ಕಾರ ಅಧೀನದಲ್ಲಿ ದೂರವಾಣಿ ಕೇಂದ್ರ ಇರುವುದರಿಂದ ತಾಂತ್ರಿಕ ಸಮಸ್ಯೆ ಇದೆ. ಆದ್ದರಿಂದ ಬೇರೆ ಜಾಗ ಗುರುತಿಸೋಣ ಎಂದರು. ಶಾಸಕರು ಎರಡ್ಮೂರು ಜಾಗ ಗುರುತಿಸಿ ಸ್ಥಳೀಯ ಮುಖಂಡರ ಸಲಹೆ ಪಡೆದು ಆದಷ್ಟು ಬೇಗ ಅಂಬೇಡ್ಕರ್ ಭವನಕ್ಕೆ ಅವಕಾಶ ಮಾಡಬೇಕು ಎಂದು ತಹಸೀಲ್ದಾರ್ ಅವರಿಗೆ ಸೂಚಿಸಿದರು.
ಆಲೂರು ತಾಲೂಕಿನ ಪಾಳ್ಯ ಹೋಬಳಿ ಕಾಂತಿ ಗ್ರಾಮದಲ್ಲಿ ಬಾಬು ಜಗಜೀವನ ರಾಮ್ ಸಮುದಾಯ ಭವನ ನಿರ್ಮಾಣಕ್ಕಾಗಿ 5 ಗುಂಟೆ ಜಾಗ ಮೀಸಲಿರಿಸಿದ್ದು, ಆ ಜಾಗ ಕಲ್ಲು ಮಣ್ಣುಗಳಿಂದ ಕೂಡಿದೆ. ಆದ್ದರಿಂದ ಬೇರೆ ಜಾಗ ನೀಡುವಂತೆ ಮನವಿ ಮಾಡಿದರು.
ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಜಾಗ ಇಲ್ಲದಿರುವುದರಿಂದ ಅದೇ ಜಾಗ ಗುರುತಿಸಲಾಗಿದೆ ಎಂದರು. ಗ್ರಾಮದಲ್ಲಿ ನೂರಾರು ಕುಟುಂಬಗಳಿದ್ದು ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಓಡಾಡುತ್ತಿದ್ದೇವೆ. ಆದ್ದರಿಂದ ಸರಿಯಾದ ರಸ್ತೆ ಕಲ್ಪಿಸುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಸಿಮೆಂಟ್ ಮಂಜು ಅವರು, ಖಾಸಗಿ ಜಮೀನಿನ ಮಾಲೀಕರಿಗೆ ಪರಿಹಾರ ನೀಡಿ ರಸ್ತೆ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ್, ಸುಬ್ರಹ್ಮಣ್ಯ ಶರ್ಮ, ಕೌಸರ್ ಅಹಮದ್, ನಿಸಾರ್ ಫಾತಿಮಾ ಇತರರು ಇದ್ದರು.
===========================