

ಚನ್ನಗಿರಿ: ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಬೀಗ ಹಾಕಲಾಗಿದ್ದ ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭಕ್ಕೆ ಆಗ್ರಹಿಸಿ ಗ್ರಾಮಸ್ಥರು ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಮದ ಮಹಿಳೆ ರೇಖಾ ಮಾತನಾಡಿ, ದಾಖಲಾತಿ ಇಲ್ಲದ ಕಾರಣದಿಂದ 2017ರಲ್ಲಿ ಗ್ರಾಮದ ಸರ್ಕಾರಿ ಶಾಲೆ ಮುಚ್ಚಿ ಬೀಗ ಹಾಕಲಾಗಿದೆ. ಅಂದಿನಿಂದ ಗ್ರಾಮದಿಂದ ಹತ್ತಾರು ಮಕ್ಕಳು ಚನ್ನಗಿರಿ ಪಟ್ಟಣದ ಎಕೆ ಕಾಲನಿಯ ಸರ್ಕಾರಿ ಶಾಲೆಗೆ ಮಕ್ಕಳನ್ನು ಆಟೋದಲ್ಲಿ ಕಳುಹಿಸಿಕೊಡಲಾಗುತ್ತಿದೆ.
ಗ್ರಾಮದ ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಅಲ್ಲಿನ ಶಾಲೆಗೆ ಕಳುಹಿಸುವುದು ಕಷ್ಟವಾಗಿದೆ. ಆದ್ದರಿಂದ ಮುಚ್ಚಿರುವ ಶಾಲೆ ಮರು ಆರಂಭ ಮಾಡುವಂತೆ ಆಗ್ರಹಿಸಿದರು.
ಗ್ರಾಮದಿಂದ 11 ವಿದ್ಯಾರ್ಥಿಗಳು ಚನ್ನಗಿರಿ ಶಾಲೆಗೆ ಹೋಗಿ ಬರುತ್ತಿದ್ದಾರೆ. ಶಾಲೆ ಆರಂಭಿಸಿದರೆ ಗ್ರಾಮದ ಮಕ್ಕಳನ್ನು ಸೇರಿಸುವ ಜವಾಬ್ದಾರಿ ನಮ್ಮದಾಗಿದೆ. ನಾರಶೆಟ್ಟಿಹಳ್ಳಿ- ಚನ್ನಗಿರಿ ನಡುವೆ 5 ಕಿ.ಮೀ. ದೂರವಿದೆ. ಗ್ರಾಮದಲ್ಲಿ ಬಹುತೇಕರು ಬಡವರು ಇದ್ದಾರೆ. ನಮ್ಮ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿ ಸಿಗಬೇಕು.
ಅನೇಕ ಬಾರಿ ಕಚೇರಿಗೆ ಹೋಗಿ ಶಾಲೆ ತೆರೆಯುವಂತೆ ಮನವಿ ಮಾಡಲಾಗಿದೆ. ಯಾವ ಅಧಿಕಾರಿಗಳು ಸ್ಪಂದಿಸಿಲ್ಲ. ಶಾಲೆ ಮುಚ್ಚಿದ ದಿನದಿಂದ ಅನೇಕ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಂಬಂಧಿತ ಅಧಿಕಾರಿಗಳು ಕೂಡಲೇ ಶಾಲೆ ತೆರೆಯಬೇಕು ಎಂದು ಮನವಿ ಮಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಡಾ.ಎಸ್. ಶಂಕರಪ್ಪ ಮಾತನಾಡಿ, ಸರ್ಕಾರಿ ಶಾಲೆಗಳು ಬಾಗಿಲು ಹಾಕುವುದು ಒಳ್ಳೆಯದಲ್ಲ. ನಾನು ಸಂಬಂಧಿತ ಅಧಿಕಾರಿಗಳ ಜತೆ ಮಾತನಾಡಿ, ಶಾಲೆ ಪ್ರಾರಂಭಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮಸ್ಥರಾದ ಸುಧಾ, ಕೆ. ಆಶಾ, ತಿಪ್ಪೇಶ್ ಪಟೇಲ್, ಲಕ್ಷ್ಮಣ, ಕೆ. ಮಹೇಶ್ವರಪ್ಪ, ಅಣ್ಣಪ್ಪ, ನಿಂಗಪ್ಪ ಇತರರಿದ್ದರು.