

ವಿಜಯವಾಣಿ ಸುದ್ದಿಜಾಲ ಹಾವೇರಿ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯು ಕಳಪೆ ಸಾಧನೆ ಮಾಡಿದ್ದು, ರಾಜ್ಯದಲ್ಲಿ 33ನೇ ಸ್ಥಾನಕ್ಕೆ ಕುಸಿತ ಕಂಡಿದೆ.
ಕಳೆದ ವರ್ಷ ಜಿಲ್ಲೆಯ ಫಲಿತಾಂಶ ಶೇ. 79.75ರಷ್ಟಾಗಿ ರಾಜ್ಯಮಟ್ಟದಲ್ಲಿ ಜಿಲ್ಲೆಯು 19ನೇ ಸ್ಥಾನದಲ್ಲಿತ್ತು. ಈ ಸಾರಿ 14 ಸ್ಥಾನ ಕುಸಿತ ಕಂಡಿದೆ. ಜಿಲ್ಲೆಯಲ್ಲಿ ಒಟ್ಟು 396 ಪ್ರೌಢಶಾಲೆಗಳಿದ್ದು, ಅದರಲ್ಲಿ ಎ ಗ್ರೇಡ್ನಲ್ಲಿ 57, ಬಿ ಗ್ರೇಡ್ನಲ್ಲಿ 75, ಸಿ ಗ್ರೇಡ್ನಲ್ಲಿ 264 ಶಾಲೆಗಳ ಫಲಿತಾಂಶ ಬಂದಿದೆ.
ಬ್ಯಾಡಗಿ ತಾಲೂಕಿನಲ್ಲಿ 39 ಶಾಲೆಗಳಿದ್ದು, ಅದರಲ್ಲಿ ಎ ಹಾಗೂ ಬಿ ಗ್ರೇಡ್ನಲ್ಲಿ ತಲಾ 10, ಸಿ ಗ್ರೇಡ್ನಲ್ಲಿ 19 ಶಾಲೆಗಳು, ಹಾನಗಲ್ಲ ತಾಲೂಕಿನಲ್ಲಿ 60 ಶಾಲೆಗಳಿದ್ದು, ಅದರಲ್ಲಿ 9 ಎ ಗ್ರೇಡ್, 17 ಬಿ ಗ್ರೇಡ್, 34 ಶಾಲೆಗಳು ಸಿ ಗ್ರೇಡ್, ಹಾವೇರಿ ತಾಲೂಕಿನಲ್ಲಿ ಒಟ್ಟು 69 ಶಾಲೆಗಳಿದ್ದು, 9 ಎ ಗ್ರೇಡ್, 15 ಬಿ, 45 ಶಾಲೆಗಳು ಸಿ ಗ್ರೇಡ್, ಹಿರೇಕೆರೂರ ತಾಲೂಕಿನಲ್ಲಿ 68 ಶಾಲೆಗಳಿದ್ದು 11 ಎ, 15 ಬಿ, 42 ಸಿ ಗ್ರೇಡ್ ಪಡೆದಿವೆ. ರಾಣೆಬೆನ್ನೂರ ತಾಲೂಕಿನಲ್ಲಿ ಒಟ್ಟು 78 ಶಾಲೆಗಳಿದ್ದು 7 ಎ, 11 ಬಿ, 60 ಶಾಲೆಗಳು ಸಿ ಗ್ರೇಡ್, ಸವಣೂರ ತಾಲೂಕಿನಲ್ಲಿ 36 ಶಾಲೆಗಳಿದ್ದು, 7 ಎ, 3 ಬಿ, 26 ಶಾಲೆಗಳು ಸಿ ಗ್ರೇಡ್ ಪಡೆದಿವೆ. ಶಿಗ್ಗಾಂವಿ ತಾಲೂಕಿನಲ್ಲಿ ಒಟ್ಟು 46 ಶಾಲೆಗಳಿದ್ದು ಎ ಹಾಗೂ 4 ಬಿ ಗ್ರೇಡ್, 38 ಶಾಲೆಗಳು ಸಿ ಗ್ರೇಡ್ ಪಡೆದಿವೆ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೇ ಫಸ್ಟ್: ಎ ಗ್ರೇಡ್ನಲ್ಲಿ ಪಾಸಾದ ವಿದ್ಯಾರ್ಥಿಗಳಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೇ ಮೊದಲಿಗರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 57ಪ್ರೌಢಶಾಲೆಗಳು ಎ ಗ್ರೇಡ್ ಫಲಿತಾಂಶ ಪಡೆದಿದ್ದು, ಅದರಲ್ಲಿ 27 ಸರ್ಕಾರಿ ಶಾಲೆಗಳು, 26 ಅನುದಾನರಹಿತ ಶಾಲೆಗಳು, 4 ಅನುದಾನಿತ ಶಾಲೆಗಳಿವೆ. ಇನ್ನು ಬಿ ಗ್ರೇಡ್ ಫಲಿತಾಂಶ ಪಡೆದ 75 ಪ್ರೌಢಶಾಲೆಗಳಲ್ಲಿ 29 ಸರ್ಕಾರಿ ಶಾಲೆಗಳು, 26 ಅನುದಾನ ರಹಿತ ಶಾಲೆಗಳು, 20 ಅನುದಾನಿತ ಶಾಲೆಗಳಿವೆ.
ಜಿಲ್ಲೆಗೆ ಮೊದಲಿಗರಿವರು: ಶಿಗ್ಗಾಂವಿ ಎಸ್ಬಿಬಿಎಂಡಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿ ತೇಜಸ್ ಯಲಿಗಾರ, ರಾಣೆಬೆನ್ನೂರ ತಾಲೂಕು ಕುಮಾರಪಟ್ಟಣದ ಅಮೃತವರ್ಷಿಣಿ ಆಂಗ್ಲ ಮಾಧ್ಯಮ ಶಾಲೆಯ ಶ್ರೇಷ್ಠಾ ಎಂ.ಎಸ್., ಹಾವೇರಿ ತಾಲೂಕು ಗುತ್ತಲದ ಆರ್.ಕೆ. ಆಂಗ್ಲ ಮಾಧ್ಯಮ ಶಾಲೆಯ ಸುಹಾಸ ಕೆ.ಎಚ್. ಶೇ. 99.04 ಅಂಕ ಗಳಿಸಿ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ರಾಣೆಬೆನ್ನೂರ ತಾಲೂಕು ಕರೂರ ಪಬ್ಲಿಕ್ ಶಾಲೆಯ ಕಿರಣ ಡಾಕೇಶ ಲಮಾಣಿ, ಗುತ್ತಲದ ಎಸ್ಆರ್ಎಸ್ ಶಾಲೆಯ ಹರ್ಷಿತಾ ಪಿ.ಆರ್. ಶೇ. 98.72 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾವೇರಿ ಸೇಂಟ್ ಆನ್ಸ್ ಶಾಲೆಯ ಕಿಶನ್ ಪಾಟೀಲ, ಹಿರೇಕೆರೂರ ತಾಲೂಕಿನ ಬುರಡಿಕಟ್ಟಿಯ ಸೇಂಟ್ ಮೇರಿಸ್ ಶಾಲೆಯ ಪ್ರೀತಿ ತೋಟಪ್ಪ ಕೋರಿಶೆಟ್ಟರ್, ಗುತ್ತಲದ ಆರ್.ಕೆ. ಪ್ರೌಢಶಾಲೆಯ ನಿಶ್ಚಿತ ಶೇಖರ ಚಂದನ ಶೇ. 98.56 ಅಂಕ ಗಳಿಸಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ.