ಸರ್ಕಾರಿ ಶಾಲೆಗಳ ಉಳಿಸುವ ಜವಾಬ್ದಾರಿ ಎಲ್ಲರದ್ದು

IMG-20240521-WA0041
Published on

ನಂಜನಗೂಡು: ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ಮೈಸೂರಿನ ಧ್ವನಿ ಫೌಂಡೇಷನ್‌ನ ಸ್ಥಾಪಕ ಅಧ್ಯಕ್ಷೆ ಡಾ.ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.


ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ಹಾಗೂ ಗ್ರಾಮೀಣ ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಗ್ರಾಮೀಣ ಪ್ರದೇಶದ ಮಹಿಳೆಯರು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಅವುಗಳನ್ನು ಎದುರಿಸಲು ಬೇಕಾದ ವಿದ್ಯೆಯನ್ನು ಪಡೆಯುವುದು ಇಂದಿನ ದಿನಗಳಲ್ಲಿ ತುರ್ತು ಅಗತ್ಯವಿದೆ ಎಂದರು.


ಶಿಕ್ಷಕ ಬಾಲಚಂದ್ರ ಭಟ್ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಬೇಕಾಗಿದೆ. ವಿದ್ಯಾರ್ಥಿಗಳ ಸಂಖ್ಯೆ 150 ಕ್ಕಿಂತ ಕಡಿಮೆಯಾದರೆ ಈ ಶಾಲೆಯನ್ನ ಪಕ್ಕದ ಶಾಲೆಗೆ ಸಂಯೋಜಿಸುತ್ತದೆ. ನಂತರ ಹಂತ ಹಂತವಾಗಿ ನಿಮ್ಮೂರಿನ ಶಾಲೆ ಮುಚ್ಚಿ ಹೋಗುತ್ತದೆ. ಹಾಗಾಗಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ನಿಮ್ಮೂರ ಶಾಲೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.


ಮುಖ್ಯ ಶಿಕ್ಷಕ ಬೆಳ್ಳೇಗೌಡ, ದೊರೆಸ್ವಾಮಿ ನಾಯಕ, ಮಹದೇವ ನಾಯಕ, ಸಿದ್ದರಾಜು, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಜಯಲಕ್ಷ್ಮೀ, ಚಂದನ್, ಸುಜನ್, ರಾಧಾ, ಮಾನಸಾ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net