ಸ್ವ-ಉದ್ಯೋಗಕ್ಕೆ ಸರ್ಕಾರಿ ಯೋಜನೆ ಸಹಕಾರಿ

ಸ್ವ-ಉದ್ಯೋಗಕ್ಕೆ ಸರ್ಕಾರಿ ಯೋಜನೆ ಸಹಕಾರಿ
Published on

ಚನ್ನರಾಯಪಟ್ಟಣ: ಸ್ವ-ಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳಲು ಸರ್ಕಾರದ ಯೋಜನೆಗಳು ಸಹಕಾರಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಔದ್ಯಮಿಕ ಕೇಂದ್ರ ಯೋಜನೆ ಮತ್ತು ವೃತ್ತಿಪರ ಕುಶಲಕರ್ಮಿಗಳ ಸುಧಾರಿತ ಉಪಕರಣಗಳ ವಿತರಣೆ ಯೋಜನೆಯಡಿ ಕೈಗಾರಿಕೆ ಇಲಾಖೆ ವತಿಯಿಂದ ಸ್ವ-ಉದ್ಯೋಗ ಮಾಡ ಬಯಸುವ ಮಹಿಳೆಯರು ಹಾಗೂ ಪುರುಷರಿಗೆ ಗುರುವಾರ ಹೊಲಿಗೆ ಯಂತ್ರ ಹಾಗೂ ರಿಪೇರಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದೆ. ಇಂದು ಹಲವು ಯುವಕ ಯುವತಿಯರು ಕರಕುಶಲ ಹಾಗೂ ಇನ್ನಿತರ ಕೌಶಲ ಹೊಂದಿದ್ದು, ಅಂತವರ ಸ್ವಾವಲಂಬಿ ಬದುಕಿಗೆ ಈ ಯೋಜನೆಗಳು ನೆರವಾಗಲಿದೆ ಎಂದರು.

ಹೊಲಿಗೆ ಯಂತ್ರಗಳನ್ನು ಪಡೆಯಲು 200ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 50ಜನರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. 30 ಜನರಿಗೆ ಮರಗೆಲಸ, ಗಾರೆ ಕೆಲಸ, ಎಲೆಕ್ಟ್ರಿಕಲ್ ರಿಪೇರಿ, ಕೊಳವೆಬಾವಿ ರಿಪೇರಿ ಕಿಟ್‌ಗಳನ್ನು ನೀಡಲಾಗಿದೆ. ಇದೆಲ್ಲದರ ಮೌಲ್ಯ ಅಂದಾಜು 10 ಲಕ್ಷ ರೂ. ಆಗಲಿದೆ. ಪ್ರತಿ ವರ್ಷವೂ ಅರ್ಹ ಫಲಾನುಭವಿಗಳ ಆಯ್ಕೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದ್ದು, ಜಿಲ್ಲಾಪಂಚಾಯಿತಿ ಮೂಲಕ ವಿತರಿಸಲಾಗುವ ಇಂತಹ ಉಪಕರಣಗಳ ಸದ್ಬಳಕೆಯಿಂದ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಕೈಗಾರಿಕಾ ವಿಭಾಗದ ವಿಸ್ತರಣಾಧಿಕಾರಿ ಆನಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net