

ಗೌರಿಬಿದನೂರು: ಟೂಲ್ ಕಿಟ್ ವಿತರಣೆ, ಆರೋಗ್ಯ ವಿಮೆ ಸೇರಿ ವಿವಿಧ ಯೋಜನೆಗಳ ಮೂಲಕ ಕಟ್ಟಡ ಕಾರ್ಮಿಕರ ಕಷ್ಟಗಳಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ಕಾರ್ಮಿಕ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 500 ಕಾರ್ಮಿಕರಿಗೆ ಟೂಲ್‌ಕಿಟ್ ವಿತರಿಸಿ ಮಾತನಾಡಿದರು.
ಆರೋಗ್ಯ, ಮದುವೆ, ಹೆರಿಗೆ, ಮಕ್ಕಳಿಗೆ ಶಿಕ್ಷಣ, ವೈದ್ಯಕೀಯ ನೆರವು ಸೇರಿ ಎಲ್ಲ ಹಂತದಲ್ಲೂ ಸರ್ಕಾರ ಕಾರ್ಮಿಕರ ಬೆನ್ನಿಗೆ ನಿಂತಿದೆ. ಕಟ್ಟಡ ಕಾರ್ಮಿಕರು ಶ್ರಮಜೀವಿಗಳಾಗಿದ್ದು, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಶಿಕ್ಷಣವನ್ನೇ ಅವರಿಗೆ ಸಂಪತ್ತನ್ನಾಗಿ ನೀಡಬೇಕು ಎಂದರು.
ಕಾರ್ಮಿಕ ನಿರೀಕ್ಷಕ ಸತೀಶ್ ಮಾತನಾಡಿ, ಕಾರ್ಮಿಕರು ತಪ್ಪದೆ ಕಾರ್ಡ್‌ಗಳನ್ನು ಮಾಡಿಸಿಕೊಳ್ಳಬೇಕು. ಆಗ ಮಾತ್ರ ಸರ್ಕಾರದ ಸೌಲಭ್ಯಗಳು ದೊರೆಯಲಿವೆ. 60 ವರ್ಷ ಪೂರ್ಣಗೊಂಡ ಹಿರಿಯ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಕೂಡ ದೊರೆಯಲಿದೆ ಎಂದರು.
ರಾಜ್ಯ ಕಟ್ಟಡ ಮತ್ತು ಶ್ರಮಿಕರ ಸಂಜೀವಿನಿ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಕಾರ್ಮಿಕರನ್ನು ದೃಷ್ಟಿಯಲ್ಲಿರಿಸಿಕೊಂಡು ಸರ್ಕಾರ ಹಂತ ಹಂತವಾಗಿ ಅಗತ್ಯ ಯೋಜನೆ, ಸೌಲಭ್ಯಗಳನ್ನು ನೇರವಾಗಿ ಅರ್ಹ ಕಾರ್ಮಿಕರಿಗೆ ತಲುಪಿಸುತ್ತಿದೆ. ಆದ್ದರಿಂದ ಅವುಗಳ ಬಗ್ಗೆ ಕಾರ್ಮಿಕರು ಮಾಹಿತಿ ಪಡೆದುಕೊಳ್ಳಬೇಕು. ಇಲಾಖೆಯಲ್ಲಿ ನೋಂದಾಯಿಸಿ ಕಾರ್ಡ್ ಪಡೆದುಕೊಂಡಾಗ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ ಎಂದರು.
ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ಕಾರ್ಮಿಕ ಸಂಘದ ಅಧ್ಯಕ್ಷ ವೆಂಕಟಾದ್ರಿ ಮಾತನಾಡಿದರು.