ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

10NSG1-Web
ಮಲ್ಲಾಪುರ ಕೆ.ಎನ್. ಗ್ರಾಮದಲ್ಲಿ ಯೋಧ ವಾಸನಗೌಡ ಪಾಟೀಲ ಅವರ ಪಾರ್ಥಿವ ಶರೀರಕ್ಕೆ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
Published on

ನೇಸರಗಿ: ದೆಹಲಿಯ ಅರ್.ಆರ್.ಕಮಾಂಡೋ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ಸಮೀಪದ ಮಲ್ಲಾಪುರ ಕೆ.ಎನ್.ಗ್ರಾಮದ ಯೋಧ ವಾಸನಗೌಡ ಪಾಟೀಲ (36) ಅವರ ಅಂತ್ಯಸಂಸ್ಕಾರವನ್ನು ಸ್ವಗ್ರಾಮದಲ್ಲಿ ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಗ್ರಾಮದ ಗಾಳೇಶ್ವರ ಮಠದಿಂದ ಹೊರಟ ಯೋಧನ ಪಾರ್ಥಿವ ಶರೀರದ ಮೆರವಣಿಗೆ ಗ್ರಾಮದ ಅಗಸಿವರೆಗೆ ಜರುಗಿತು. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ‘ವೀರ ಜವಾನ್ ವಾಸನಗೌಡ ಅಮರ್ ರಹೇ’ ಎಂದು ಘೋಷಣೆ ಕೂಗಿದರು. ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನರು ಯೋಧನ ಅಂತಿಮ ದರ್ಶನ ಪಡೆದರು.

ಯೋಧನ ತಂದೆ, ಮಾಜಿ ಯೋಧ ನಿಂಗನಗೌಡ, ತಾಯಿ, ಪತ್ನಿ ಲಕ್ಷ್ಮೀ ಹಾಗೂ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತು. ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ಧುರೀಣ ನಿಂಗನಗೌಡ ದೊಡಗೌಡರ, ಪಿಎಸ್‌ಐ ವೈ.ಎಲ್.ಶೀಗಿಹಳ್ಳಿ, ಗ್ರಾಮಲೆಕ್ಕಾಧಿಕಾರಿ ರಾಮಚಂದ್ರ ನಾಯ್ಕ, ಪಿಡಿಒ ಬಸನಗೌಡ ಪಾಟೀಲ, ಶಿವನಗೌಡ ಪಾಟೀಲ, ಎಸ್.ಬಿ.ಗಡೆಣ್ಣವರ, ಕಲ್ಲಪ್ಪ ಉಪ್ಪಾರ, ರಾಜು ಬುಗಡಿಗಟ್ಟಿ, ಸುಬೇದಾರ್ ಅಶೋಕ ಜಾಧವ, ಸಿದ್ದಪ್ಪ ಚಿಕ್ಕಬಸಣ್ಣವರ, ಅಶೋಕ ವಕ್ಕುಂದ, ಜಿಪಂ ಸದಸ್ಯ ನಿಂಗಪ್ಪ ಅರಕೇರಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಫ್. ದೊಡಗೌಡರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net