

ಗುಡಿಬಂಡೆ : ಸುಮಾರು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಬಗರ್‌ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಸಾಗುವಳಿ ಚೀಟಿ ನೀಡುವಲ್ಲಿ ಸರ್ಕಾರಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥರೆಡ್ಡಿ ಆರೋಪಿಸಿದರು.
ಪಟ್ಟಣದ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಬಣದ ಕಚೇರಿಯಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಗರ್‌ಹುಕುಂ ಯೋಜನೆಯಡಿ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಬದುಕುತ್ತಿರುವ ಅನೇಕ ರೈತರು ಹಕ್ಕುಪತ್ರ ನೀಡುವಂತೆ ಫಾರಂ.50, 53 ಹಾಗೂ 57ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. 15-20 ವರ್ಷಗಳ ಹಿಂದೆ ಫಾರಂ ನಂ.50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದವರಿಗೂ ಸಾಗುವಳಿ ಚೀಟಿ ನೀಡಿಲ್ಲ. ಇನ್ನೂ ಫಾರಂ 57ರಲ್ಲಿ ಸಲ್ಲಿಸಿದ ಅನೇಕ ರೈತರ ಅರ್ಜಿಗಳನ್ನು ರದ್ದು ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ಕೆಲವು ರೈತರಿಗೆ ಸಾಗುವಳಿ ಚೀಟಿ ನೀಡುತ್ತಾರೆ. ಆದರೆ ಅರ್ಜಿ ಸಲ್ಲಿಸಿದ ಅರ್ಹರಿಗೆ ಸಾಗುವಳಿ ಚೀಟಿಗಳನ್ನು ನೀಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದರು.
ಭೂ ಹಕ್ಕುದಾರರ ವೇದಿಕೆ ನಿರ್ದೇಶಕ ಬಾಲಗಂಗಾಧರ್ ಮಾತನಾಡಿ, ವೇದಿಕೆ ವತಿಯಿಂದ ಈಗಾಗಲೇ ಪಕ್ಕದ ಗೌರಿಬಿದನೂರು ತಾಲೂಕಿನಲ್ಲಿ ಪ್ರತಿಭಟನೆ, ಹೋರಾಟಗಳನ್ನು ಮಾಡಿ ಸುಮಾರು ವರ್ಷಗಳಿಂದ ರಚನೆಯಾಗದಂತಹ ಬಗರ್‌ಹುಕುಂ ಸಮಿತಿ ರಚನೆಯಾಗುವಂತೆ ಮಾಡಲಾಗಿದೆ. ಇದೀಗ ರೈತರಿಗೆ ಹಂತಹಂತವಾಗಿ ಸಾಗುವಳಿ ಚೀಟಿ ದೊರೆಯಲಿದೆ. ಗುಡಿಬಂಡೆಯಲ್ಲೂ ಸಮಿತಿ ರಚನೆಯಾಗಿ ವರ್ಷ ಕಳೆದಿದ್ದರೂ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಹಾಗಾಗಿ ವೇದಿಕೆ ವತಿಯಿಂದ ಗ್ರಾಮಗಳಲ್ಲಿ ಸರ್ವೇ ನಡೆಸಿ ಅರ್ಜಿ ಸಲ್ಲಿಸಿದ ರೈತರನ್ನು ಪತ್ತೆಹಚ್ಚಿ ಸಂಘಟನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಎದುರು ಹೋರಾಟ, ಪ್ರತಿಭಟನೆ ಹಮ್ಮಿಕೊಂಡು ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಾಗುವುದು ಎಂದರು.
ವೇದಿಕೆಯ ಗುಡಿಬಂಡೆ ತಾಲೂಕು ಸಮಿತಿ ಅಧ್ಯಕ್ಷ ಜಯರಾಂ, ಸಂಯೋಜಕಿ ಸೌಭಾಗ್ಯ, ಕಾರ್ಯದರ್ಶಿ ಬೈಯಣ್ಣ, ಉಪಾಧ್ಯಕ್ಷ ಗೌಸ್‌ಪೀರ್, ಸದಸ್ಯರಾದ ಶ್ರೀನಿವಾಸ್, ಭಾರತಮ್ಮ, ವೇದಿಕೆ ಸಿಬ್ಬಂದಿಯಾದ ಸಂತೋಷ್ ಕುಮಾರ್ ಹಾಗೂ ಅನುಷಾ ಮುಂತಾದವರು ಹಾಜರಿದ್ದರು.