

ತುಮಕೂರು: ಶತಮಾನೋತ್ಸವ ಸಂಭ್ರಮದಲ್ಲಿರುವ ತಾಲೂಕಿನ ಬ್ರಹ್ಮಸಂದ್ರ ಸರ್ಕಾರಿ ಶಾಲೆ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ರವೀಂದ್ರ ಕಲಾನಿಕೇತನದ ಚಿತ್ರಕಲಾವಿದರೊಂದಿಗೆ ಜತೆಗೂಡಿ ಹಳೇ ವಿದ್ಯಾರ್ಥಿಗಳು ಶಾಲೆ ಗೋಡೆಗಳ ಮೇಲೆ ರಂಗುರಂಗಿನ ಚಿತ್ತಾರಗಳನ್ನು ಮೂಡಿಸಿ ಮೆರಗು ನೀಡಿದ್ದಾರೆ.
ತುಮಕೂರಿನ ಸಹಕಾರ್ ಸಂಸ್ಥೆಯ ವತಿಯಿಂದ ಸಂಸ್ಥೆ ಸದಸ್ಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ರವೀಂದ್ರ ಕಲಾನಿಕೇತನದ ಚಿತ್ರಕಲಾಕಾರರು ಒಟ್ಟಿಗೆ ಸೇರಿ ಗೋಡೆಗಳ ಮೇಲೆ ರಂಗು ರಂಗಿನ ಚಿತ್ತಾರ ಬಿಡಿಸುವ ಮೂಲಕ ಶಾಲೆಗೆ ಹೊಸ ಕಳೆ ತಂದಿದ್ದಾರೆ. ಮಕ್ಕಳ ಮನಸ್ಸು ಉಲ್ಲಾಸಗೊಳಿಸುವ ಚಿತ್ತಾರಗಳು ಕಣ್ಮನಸೆಳೆಯುತ್ತಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಮಹಾಲಿಂಗಪ್ಪ , ವಿಜ್ಞಾನ ವಸ್ತುಪ್ರದರ್ಶನ, ನಿತ್ಯ ಮನೆಪಾಠ, ಸ್ವಚ್ಚತಾ ಅಭಿಯಾನ, ಸೈಕ್ಲೋಥಾನ್ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು 2018 ರಿಂದ ನಡೆಸಿಕೊಂಡು ಬಂದಿರುವ ಸಹಕಾರ್ ಸಂಸ್ಥೆಯು ’ಸಹಕಾರ್ ಸೆ ಶಿಕ್ಷಾ’ ಎಂಬ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳಿಗೆ ಉತ್ಸಾಹ ಮೂಡಿಸುವ, ಕಲಿಕೆಯಲ್ಲಿ ಆಸಕ್ತಿ ಬೆಳೆಸುವ, ದಾಖಲಾತಿ ಹೆಚ್ಚಿಸುವ ಸಲುವಾಗಿ ಕೈಗೊಂಡ ಈ ಕಾರ್ಯವೂ ಸಹಕಾರಿಯಾಗಲಿದೆ ಎಂದರು.
ಯುವಕರು ಸಮಾಜದ ಬಗ್ಗೆ ಕಳಕಳಿ ಹೊಂದಬೇಕು. ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಸದಸ್ಯರು ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸಲು ಬಣ್ಣ ಬಳಿಯುವ ಜತೆಗೆ ಕಲಾವಿದರ ಜತೆಗೂಡಿ ಮಕ್ಕಳ ಮನಸಿನ ಮೇಲೆ ಪರಿಣಾಮಬೀರುವ ಚಿತ್ತಾರಗಳನ್ನು ಮೂಡಿಸುತ್ತಿದ್ದಾರೆ. ಅಕ್ಷಯ್ ಭಟ್ ಸಹಕಾರ್ ಸಂಸ್ಥೆ ಅಧ್ಯಕ್ಷ