ಸರ್ಕಾರಿ ಜಮೀನು ಮಾರಾಟ !?

Published on

ಉಳ್ಳಾಲ: ಹರೇಕಳ ಗ್ರಾಮದಲ್ಲಿ ಸರ್ಕಾರಿ ಸ್ಥಳವನ್ನು ಖಾಸಗಿಯವರು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಇಸ್ಮಾಯಿಲ್ ಎಂಬುವವರು ತಹಸೀಲ್ದಾರ್‌ಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಜಮೀನಿನಲ್ಲಿ ನಡೆಯುತ್ತಿದ್ದ ಮನೆ ನಿರ್ಮಾಣ ಕೆಲಸಕ್ಕೆ ತಡೆ ನೀಡಲಾಗಿದೆ.

ಉಳ್ಳಾಲ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಉಳಿದಿರುವ ಸರ್ಕಾರಿ ಜಮೀನು, ಮಾರಾಟವಾಗಿರುವ ಜಮೀನು, ಪಂಚಾಯಿತಿಗಳು ಲೆಕ್ಕವೇ ನೀಡದ ಜಮೀನಿನ ಬಗ್ಗೆ ಡಿ.2ರಂದು ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ಹರೇಕಳ ಗ್ರಾಮದಲ್ಲಿ 45 ಸೆಂಟ್ಸ್ ಸರ್ಕಾರಿ ಜಮೀನನ್ನು ಮೂವರು ಪ್ರಭಾವಿಗಳು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಕ್ರಮ ಕೈಗೊಳ್ಳುವಂತೆ ಇಸ್ಮಾಯಿಲ್ ದೂರು ನೀಡಿದ್ದರು.

ಹರೇಕಳ ಗ್ರಾಮದ ರಾಜಗುಡ್ಡೆ ಎಂಬಲ್ಲಿರುವ ಸ.ನಂ. 12/1ಎ ಯಲ್ಲಿ 2023-24ನೇ ಸಾಲಿನಲ್ಲಿ 23 ಎಕರೆ 47.30 ಸರ್ಕಾರಿ ಜಮೀನು ಇರುವ ದಾಖಲೆ ಇದೆ. ಇದರಲ್ಲಿ ಒಂದಷ್ಟು ಜಮೀನು ಮಸೀದಿ, ಶಾಲೆಗೆ ನೀಡಿ ಸರ್ಕಾರ ಆದೇಶಿಸಿದೆ. ಉಳಿದ ಜಮೀನಿಗೆ ನವೆಂಬರ್‌ನಲ್ಲಿ ತಹಸೀಲ್ದಾರ್ ಭೇಟಿ ನೀಡಿ ಅಧಿಕಾರಿಗಳು ಮತ್ತು ಪಂಚಾಯಿತಿ ಪ್ರತಿನಿಧಿ ಸಮ್ಮುಖದಲ್ಲಿ ಸರ್ವೇ ಮಾಡಿದ್ದರು. ಆದರೆ ರಾಜಗುಡ್ಡೆ ದೇರಿಕಟ್ಟೆಯಲ್ಲಿ 45 ಸೆಂಟ್ಸ್ ಜಮೀನನ್ನು ಮೂವರು ಪ್ರಭಾವಿಗಳು 15 ಸೆಂಟ್ಸ್‌ನಂತೆ ಮಾರಾಟ ಮಾಡಿದ್ದು, ಇಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪುಟ್ಟರಾಜು ಬುಧವಾರ ಸ್ಥಳಕ್ಕೆ ಗ್ರಾಮಕರಣಿಕರನ್ನು ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಮನೆ ನಿರ್ಮಾಣ ಕೆಲಸ ಪ್ರಗತಿಯಲ್ಲಿರುವುದು ಕಂಡು ಬಂದಿದ್ದು, ತಮ್ಮ ಪಟ್ಟಾ ಜಾಗ ಎಂದು ತಿಳಿಸಿದ್ದಾರೆ. ಸರ್ಕಾರದಿಂದ ಜಮೀನಿನ ಸರ್ವೇ ನಡೆಸಿದ ಬಳಿಕ ಪಟ್ಟಾ ಜಾಗ ಆಗಿದ್ದರೆ ಮನೆ ನಿರ್ಮಿಸುವಂತೆ ಗ್ರಾಮಕರಣಿಕರು ಸೂಚಿಸಿದ್ದು, ಅದುವರೆಗೆ ಕೆಲಸ ನಿಲ್ಲಿಸುವಂತೆ ತಿಳಿಸಿದ್ದಾರೆಂದು ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ.

ಹರೇಕಳ ಗ್ರಾಮದಲ್ಲಿ ಈಗಾಗಲೇ ಬಡವರಿಗಾಗಿ ನಿವೇಶನ ಗುರುತಿಸುವ ಕಾರ್ಯ ನಡೆದಿದೆ. ಅರ್ಜಿ ಸಲ್ಲಿಸಲು ದಿನಾಂಕವೂ ಮುಗಿದಿದೆ. ಗುರುತಿಸಲ್ಪಟ್ಟ ಜಮೀನಿನಲ್ಲಿ ಲೇಔಟ್ ಮಾಡುವ ಬಗ್ಗೆ ಸ್ವತಃ ವಿದಾನಸಭಾ ಅಧ್ಯಕ್ಷರೇ ರೂಪುರೇಷೆ ನೀಡಿದ್ದಾರೆ. ಅರ್ಹರ ಪಟ್ಟಿ ತಯಾರಿಸುವ ಕಸರತ್ತು ನಡೆಯುತ್ತಿದೆ. ಈ ನಡುವೆ ಗ್ರಾಮದಲ್ಲಿ 45 ಸೆಂಟ್ಸ್ ಸರ್ಕಾರಿ ಜಮೀನು ಖಾಸಗಿಯವರು ಮಾರಾಟ ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ರೀತಿ ಹಲವು ಗ್ರಾಮಗಳಲ್ಲಿ ನಡೆದಿರುವ ಸಾಧ್ಯತೆ ಇರುವುದರಿಂದ ಕಂದಾಯ ಇಲಾಖೆ ಅಧಿಕಾರಿಗಳು ಪ್ರತೀ ಗ್ರಾಮದಲ್ಲೂ ಸರ್ಕಾರಿ ಜಮೀನು ಗುರುತಿಸಿ ಉಳಿಸುವ ಕೆಲಸ ಮಾಡಬೇಕು. ಈ ಬಗ್ಗೆ ತಾಲೂಕಿನಾದ್ಯಂತ ಹೋರಾಟ ನಡೆಸಲಾಗುವುದು ಎಂದು ಸಿಪಿಐಎಂ ಮುಖಂಡ ರಫೀಕ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net