ಸರ್ಕಾರಿ ಆಸ್ಪತ್ರೆ ಶೀಘ್ರ ನಿರ್ಮಾಣ!

FotoJet (1)
Published on

ಮಾಗಡಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ | ಸೋಲೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರಿಶೀಲನೆ

ಮಾಗಡಿ : ಐದಾರು ತಿಂಗಳಲ್ಲಿ ಮಾಗಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ತಾಲೂಕಿನ ಸೋಲೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಘೋಷಿಸಿದಂತೆ ಮಾಗಡಿ ಪಟ್ಟಣದಲ್ಲಿ ಹೊಸದಾಗಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗುವುದು, ನೆಲಮಂಗಲದಲ್ಲಿ 100 ಬೆಡ್ ಉಳ್ಳ ಹೊಸ ಸರ್ಕಾರಿ ಆಸ್ಪತ್ರೆಗೆ ಮುಂದಿನ ತಿಂಗಳು ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದಾಗಿ ಈ ಭಾಗದಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತಿದ್ದು, ಅಪಘಾತದಲ್ಲಿ ಮೃತಪಟ್ಟ ಶವಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸುವುದರಿಂದ ತೊಂದರೆ ಉಂಟಾಗಿದ್ದು, ಸೋಲೂರಿನ ಆಸ್ಪತ್ರೆಯಲ್ಲಿಯೇ ಶವಾಗಾರ ನಿರ್ಮಿಸಲು ಕ್ರಮವಹಿಸುವುದಾಗಿ ತಿಳಿಸಿದರು.

ಸೋಲೂರು ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ವೈದ್ಯರು ಸೇರಿ ಎಲ್ಲ ಸೌಲಭ್ಯಗಳಿದ್ದರೂ ಹೆರಿಗೆ ಪ್ರಮಾಣ ಕಡಿಮೆ ಇರುವುದಾದರು ಏಕೆ, ಇದೇ ರೀತಿ ನೆಲಮಂಗಲ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯವಿದೆ. ಅಲ್ಲಿ ಪ್ರತಿ ತಿಂಗಳು 70 ಹೆರಿಗೆಯಾಗುತ್ತಿದೆ. ಇಲ್ಲಿ 7 ರಿಂದ 8 ಹೆರಿಗೆ ಆಗುತ್ತಿದೆ, ರಾತ್ರಿ ವೇಳೆ ವೈದ್ಯರಿರುವುದಿಲ್ಲ ಏಕೆ ಎಂದು ಡಿಎಚ್‌ಒ ಅವರನ್ನು ತರಾಟೆ ತೆಗೆದುಕೊಂಡರು.

ಆಸ್ಪತ್ರೆಯಲ್ಲಿ ಪ್ರತಿನಿತ್ಯ ಎಷ್ಟು ಮಂದಿ ಒಳರೋಗಿ, ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಸಮಸ್ಯೆ ಸರಿಪಡಿಸಿ ಇನ್ನೆರಡು ತಿಂಗಳಲ್ಲಿ ವರದಿ ನೀಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮೋಟಗಾನಹಳ್ಳಿ ಸರ್ಕಾರಿ ಆಸ್ಪತ್ರೆ ನಿರ್ಮಿಸಿ ವರ್ಷಗಳೇ ಕಳೆದಿದ್ದು, ವೈದ್ಯರಿಲ್ಲದೆ ದೂರದ ಸೋಲೂರು, ಮಾಗಡಿ, ನೆಲಮಂಗಲಕ್ಕೆ ಚಿಕಿತ್ಸೆಗೆ ತೆರಳಬೇಕಿದೆ. ಕೂಡಲೇ ವೈದ್ಯರನ್ನು ನೇಮಿಸುವಂತೆ ಗ್ರಾಮದ ಮಲ್ಲಯ್ಯ, ಶಿವರುದ್ರಯ್ಯ ಸಚಿವರಲ್ಲಿ ಮನವಿ ಮಾಡಿದರು. ಈ ಬಗ್ಗೆ ಡಿಎಚ್‌ಒ ಅವರಿಂದ ಮಾಹಿತಿ ಪಡೆಯಲಾಗಿದ್ದು, ತುರ್ತಾಗಿ ವೈದ್ಯರನ್ನು ನೇಮಿಸುವ ಭರವಸೆ ನೀಡಿದರು.

ಸಣ್ಣ, ಪುಟ್ಟ ಕಾಯಿಲೆಗಳಿಗೂ ಮಾಗಡಿ, ತುಮಕೂರು, ಕುಣಿಗಲ್, ನೆಲಮಂಗಲ ಆಸ್ಪತ್ರೆಗಳಿಗೆ ರವಾನಿಸುತ್ತಾರೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು. ಆಗ ಆಸ್ಪತ್ರೆಯಲ್ಲಿ ಎಲ್ಲ ಸವಲತ್ತು ನೀಡಲಾಗಿದೆ. ಏಕೆ ಚಿಕಿತ್ಸೆಗಾಗಿ ಬೇರೆಡೆಗೆ ಕಳುಹಿಸುತ್ತೀರಾ ಎಂದು ವೈದ್ಯರ ವಿರುದ್ಧ ಕೆಂಡಮಂಡಲರಾದರು.

ಸಚಿವರು ವಾರ್ಡ್‌ಗೆ ಭೇಟಿ ನೀಡಿದ ವೇಳೆ ಯಾವ ರೋಗಿಗಳೂ ಚಿಕಿತ್ಸೆಗಾಗಿ ದಾಖಲಾಗಿಲ್ಲದನ್ನು ಕಂಡು ಕೆಂಡಾಮಂಡಲರಾದರು. ಆಶಾ ಕಾರ್ಯಕರ್ತೆಯರು ವೇತನ ಹೆಚ್ಚಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟವರ ಬಳಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷರಾದ ಗಂಗರಂಗಯ್ಯ, ನಾರಾಯಣ್, ಜಿಪಂ ಮಾಜಿ ಸದಸ್ಯ ರಂಗಸ್ವಾಮಯ್ಯ, ನಾಗರುದ್ರ ಶರ್ಮ, ತಾಪಂ ಮಾಜಿ ಸದಸ್ಯ ಶಂಕರಪ್ಪ, ಕಿರಣ್, ಸಿ.ಆರ್.ಗೌಡ, ಕೆಟಿ, ಮಂಜುನಾಥ್, ಡಿಎಚ್‌ಒ ಡಾ.ನಿರಂಜನ್ ಮೂರ್ತಿ, ಪ್ರಭಾರ ಟಿಎಚ್‌ಒ ಡಾ. ರಾಮಚಂದ್ರ, ಡಾ.ಜಯಂತಿ, ಡಾ.ಸರಳಾ, ಡಾ. ಪೂರ್ಣಚಂದ್ರ ತೇಜಸ್ವಿನಿ, ಡಾ.ಉಮಾದೇವಿ ಇತರರು ಇದ್ದರು.

ಸೋಲೂರು ಹೋಬಳಿ ಮಾಗಡಿ ಹಾಗೂ ನೆಲಮಂಗಲ ವ್ಯಾಪ್ತಿಯಲ್ಲಿ ಇರುವುದರಿಂದ ಆಡಳಿತಾತ್ಮಕವಾಗಿ ಸಮಸ್ಯೆ ಇದ್ದರೂ ಆರೋಗ್ಯ ಸೇವೆಗೆ ಯಾವುದೆ ಅಡ್ಡಿಬರುವುದಿಲ್ಲ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಗೌರವದಿಂದ ಕಾಣಬೇಕು. | ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net