

ವಿಜಯವಾಣಿ ಸುದ್ದಿಜಾಲ ಹಾವೇರಿ
ಕರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬಗಳನ್ನು ಅತ್ಯಂತ ಸರಳವಾಗಿ, ಸರ್ಕಾರದ ನೀಡಿರುವ ಮಾರ್ಗಸೂಚಿಯಂತೆ ಶಾಂತಿಯುತವಾಗಿ ಆಚರಿಸ ಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಹೇಳಿದರು.
ಆಗಸ್ಟ್ 22ರಂದು ಗಣೇಶೋತ್ಸವ ಹಾಗೂ ಆ. 30ರಂದು ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಗುರುಭವನದಲ್ಲಿ ಆಯೋಜಿಸಿದ್ದ ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಮತಿ ಪಡೆದ ಕಮಿಟಿಗಳು ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ್ಲ ಪ್ರತಿದಿನ ಸ್ಯಾನಿಟೈಸೇಶನ್ ಮಾಡಬೇಕು. ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಬೇಕು. ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಮಾಡಬೇಕು. ಎಲ್ಲರೂ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಪರಿಸರ ಸ್ನೇಹಿ ಮೂರ್ತಿಗಳ ಪೂಜೆಗೆ ಆದ್ಯತೆ ನೀಡಬೇಕು ಎಂದರು.
ಕರೊನಾ ಕುರಿತು ಜಿಲ್ಲೆಯಲ್ಲಿ ಜನರಿಗೆ ಇನ್ನೂ ಎಚ್ಚರಿಕೆ ಕಾಣುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ತಿಂಗಳ ಅವಧಿಯಲ್ಲಿ ಇನ್ನೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡು ಸಾಕಷ್ಟು ನೋವು ಪಡುವಂತಹ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದಾಗಿ ಕರೊನಾ ನಿಯಂತ್ರಿಸಲು ಸರ್ಕಾರದ ನಿಯಮಾವಳಿ ಪಾಲಿಸಿಕೊಂಡು ಹಬ್ಬಗಳ ಆಚರಣೆಗೆ ಮುಂದಾಗಬೇಕು ಕಿವಿಮಾತು ಹೇಳಿದರು.
ಎಸ್ಪಿ ಕೆ.ಜಿ. ದೇವರಾಜ್ ಮಾತನಾಡಿ, ಕರೊನಾ ನಿಯಂತ್ರಣದ ಸಲುವಾಗಿ ಹಬ್ಬಗಳನ್ನು ಸರಳವಾಗಿ ಆಚರಿಸಬೇಕು. ಸಾರ್ವಜನಿಕರು ತಾವೇ ಸ್ವಯಂ ನಿರ್ಬಂಧ ಮಾಡಿಕೊಂಡು ಸರಳವಾಗಿ ಹಬ್ಬ ಆಚರಿಸಬೇಕು. ಬಣ್ಣರಹಿತ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ ಎಂದರು.
ಅಗ್ನಿಶಾಮಕ ದಳದ ಅಧಿಕಾರಿ ಸೋಮಶೇಖರ ಅಗಡಿ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಜಾಗದಲ್ಲಿ ವಾಹನಗಳ ಓಡಾಟಕ್ಕೆ 3ರಿಂದ 4 ಮೀಟರ್ ಅಂತರ ಕಾಪಾಡಿಕೊಳ್ಳಬೇಕು. ನಾಲ್ಕೈದು ಬಕೀಟ್ ಮರಳು ಮತ್ತು ನೀರನ್ನು ತುಂಬಿಟ್ಟು ಬೆಂಕಿ ಅನಾಹುತವಾಗದಂತೆ ಎಚ್ಚರ ವಹಿಸಬೇಕು ಎಂದರು.
ನಗರಸಭೆ ಆಯುಕ್ತ ಬಸವರಾಜ ಜಿದ್ದಿ ಮಾತನಾಡಿ, ಗಣೇಶ ಮೂರ್ತಿ ವಿಸರ್ಜನೆಗೆ ನಗರಸಭೆಯಿಂದ ತಾತ್ಕಾಲಿಕ ನೀರಿನ ಹೊಂಡದ ವ್ಯವಸ್ಥೆ ಮಾಡಲಾಗುವುದು ಎಂದರು.
ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ಮೊಹರಂ ಹಾಗೂ ಗಣೇಶೋತ್ಸವ ಕಮೀಟಿಯ ಸದಸ್ಯರು ಅಭಿಪ್ರಾಯ ತಿಳಿಸಿದರು. ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಉಪವಿಭಾಗಾಧಿಕಾರಿ ಡಾ. ದಿಲೀಪ್ ಶಶಿ, ಪ್ರಭಾರ ತಹಸೀಲ್ದಾರ್ ಶರಣಮ್ಮ ಕಾರಿ, ಡಿಎಸ್ಪಿ ವಿಜಯಕುಮಾರ ಸಂತೋಷ ಇತರರಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ತಾಲೂಕುವಾರು ಸಭೆಗಳನ್ನು ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವರ್ಷದ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಉತ್ಸವಗಳನ್ನು ಆಚರಿಸಬೇಕು. ಮೆರವಣಿಗೆ, ಮನರಂಜನೆಗಳನ್ನು ನಿಷೇಧಿಸಲಾಗಿದೆ. ಗಣೇಶಮೂರ್ತಿಗಳ ವಿಸರ್ಜನೆಗೆ ಕೃತಕ ಹೊಂಡಗಳನ್ನು ನಿರ್ವಿುಸಲಾಗುವುದು. ಪೊಲೀಸ್ ಇಲಾಖೆಯಿಂದ ಎಲ್ಲ ಸಹಕಾರದೊಂದಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು.| ಮಲ್ಲಿಕಾರ್ಜುನ ಬಾಲದಂಡಿ ಎಎಸ್ಪಿ