

ಬೆಂಗಳೂರು: ಪಾರಂಪರಿಕ ತಾಣಗಳನ್ನು ನಿರ್ವಹಣೆಗೆ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ರಾಜ್ಯದಲ್ಲಿರುವ 25 ಸಾವಿರಕ್ಕೂ ಅಧಿಕ ಪಾರಂಪರಿಕ ತಾಣಗಳನ್ನು ದತ್ತು ನೀಡುವುದಕ್ಕೆ ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕ ಚಿತ್ರಕಲಾ ಪರಿಷತ್ತು "ನಮ್ಮ ಆರ್ಟ್ ಬೆಂಗಳೂರು' ಶೀರ್ಷಿಕೆ ಅಡಿ ಆಯೋಜಿಸಿರುವ 5 ದಿನಗಳ ರಾಷ್ಟ್ರೀಯ ಕಲಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಕೈಗಾರಿಕೋದ್ಯಮಿಗಳು, ಮಠಗಳು, ಉದ್ಯಮಿಗಳು, ಟ್ರಸ್ಟ್ಗಳು, ಸಂಟನೆಗಳು ಸೇರಿ ಉಳ್ಳವರು ಸ್ಮಾರಕ ದತ್ತು ಯೋಜನೆಯಡಿ ಸ್ಮಾರಕಗಳನ್ನು ದತ್ತು ಪಡೆಯಬಹುದು. ಈ ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಿ ಸ್ಮಾರಕಗಳ ರಕ್ಷಣೆಗೆ ಅಗ್ಯವಿರುವ ಮೂಲಸೌಕರ್ಯ ಕಲ್ಪಿಸಲು ಸಹಕಾರಿಯಾಗುತ್ತದೆ. ದತ್ತು ಪಡೆಯುವ ಮೂಲಕ ಉಳ್ಳವರು, ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕು ಎಂದು ಮನವಿ ಮಾಡಿದರು.
ಚಿತ್ರಸಂತೆ ರಾಷ್ಟ್ರದ ಮಾತ್ರವಲ್ಲ ಜಾಗತಿಕವಾಗಿ ಗಮನ ಸೆಳೆದಿದೆ. ಚಿತ್ರ ಸಂತೆಯೊಳಗೆ ಅರ್ಧ ಕಿ.ಮೀ. ಹೋದರೆ ಕಲೆಯಲ್ಲಿ ಅಭಿರುಚಿ ಇಲ್ಲದಿದ್ದರೂ ಪುಳಕಿತರಾಗಿ, ಆಶ್ಚರ್ಯಚಕಿತರಾಗಿ ಸಮಾಧಾನದ ಭಾವನೆ ಬರುತ್ತದೆ. ಕೋಲ್ಕತಾ ಬಿಟ್ಟರೆ ಎಲ್ಲ ಕಲೆಯ ಬಗ್ಗೆ ಆಸಕ್ತಿ ಹೊಂದಿರುವ ರಾಜಧಾನಿ ಬೆಂಗಳೂರು ಎಂಬುದು ಹೆಮ್ಮೆಯ ಸಂಗತಿ ಎಂದು ಸಚಿವರು ಹೇಳಿದರು.
ಪ್ರಸಿದ್ಧ ಕಲಾವಿದ ವಿಲಾಸ್ ನಾಯಕ್ ಸ್ಥಳದಲ್ಲೇ ಕಲಾಕೃತಿ ರಚಿಸಿ ಗಮನ ಸೆಳೆದರು. ಉದ್ಯಮಿ ಟಿ.ಎನ್. ಅಗರ್ವಾಲ್, ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಟಿ. ಪ್ರಭಾಕರ್, ಕಾರ್ಯದರ್ಶಿ ಶಶಿಧರ ರಾವ್, ಸಹಾಯಕ ಕಾರ್ಯದರ್ಶಿಗಳಾದ ಬಿ.ಎಲ್. ಶ್ರೀನಿವಾಸ್, ಚಂದ್ರಶೇಖರ್, ಕಾರ್ಯಕ್ರಮದ ಸಂಯೋಜಕ ವಿಮಲನಾಥನ್, ಕಲಾಕೃತಿಗಳ ಸಂಗ್ರಹಕಾರ ಹರೀಶ್ ಪದ್ಮನಾಭ ಇತರರು ಇದ್ದರು.
ಸರ್ಕಾರದಿಂದ ಸಹಕಾರ: ಇದು ರಾಷ್ಟ್ರೀಯ ಕಲಾ ಉತ್ಸವವಾಗಿದೆ. ಕಲಾವಿದರು ಮತ್ತು ಕಲಾಪ್ರೇಮಿಗಳ ನಡುವೆ ನೇರ ಸಂಪರ್ಕವನ್ನು ಒದಗಿಸುವ ಈ ಕಾರ್ಯಕ್ರಮದಲ್ಲಿ ಮಾರಾಟವಾಗುವ ಯಾವುದೇ ಕಲಾಕೃತಿಗೆ ಪರಿಷತ್ತು ಕಮಿಷನ್ ಪಡೆಯುವುದಿಲ್ಲ. ಕರ್ನಾಟಕವನ್ನು ಸಾಂಸತಿಕವಾಗಿ ಶ್ರೀಮಂತ ಮಾಡುವ ಉದ್ದೇಶದಿಂದ ಕಲಾಪ್ರದರ್ಶನ ಆಯೋಜಿಸಲಾಗಿದೆ. 25 ಲ ರೂ. ಅನುದಾನವನ್ನು ನೀಡುವ ಮೂಲಕ ಚಿತ್ರಕಲೆಯನ್ನು ಸರ್ಕಾರ ಪ್ರೋತ್ಸಾಹಿಸಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಅಧ್ಯ ಬಿ.ಎಲ್. ಶಂಕರ್ ಹೇಳಿದರು.
ಬಾನುವಾರವರೆಗೆ ಆಯೋಜನೆ: "ನಮ್ಮ ಆರ್ಟ್ ಬೆಂಗಳೂರು' ಉತ್ಸವ, ಭಾನುವಾರವರೆಗೆ (ಜೂ. 1) ನಡೆಯಲಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಪಾಂಡಿಚೇರಿ, ಉತ್ತರ ಪ್ರದೇಶ ಸೇರಿ ದೇಶದ 12 ರಾಜ್ಯಗಳ ಕಲಾವಿದರು ಭಾಗಿಯಾಗಿದ್ದಾರೆ.