ವೈದ್ಯರ ಪದೋನ್ನತಿಗೆ ಮನವಿ : ಸಿ ಆ್ಯಂಡ್ ಆರ್ ತಿದ್ದುಪಡಿಗೆ ಆಗ್ರಹ

Arogya soudha
Published on

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಎರಡು ವರ್ಷಗಳಿಂದ ವೈದ್ಯರಿಗೆ ಪದೋನ್ನತಿ ನೀಡುವ ಕಾರ್ಯ ನನೆಗುದಿಗೆ ಬಿದ್ದಿದೆ. ಕ್ರಮವಹಿಸದ ಸರ್ಕಾರ ದಿನಕ್ಕೊಂದು ನಿಯಮ ಹೇರುತ್ತಿರುವುದು ಸರ್ಕಾರಿ ವೈದ್ಯರನ್ನು ಉಸಿರುಗಟ್ಟುವಂತೆ ಮಾಡಿದೆ. ಸೇವಾ ಹಿರಿತನದ ಆಧಾರದ ಮೇಲೆ ಜೇಷ್ಠತಾಪಟ್ಟಿ ಅಂತಿಮಗೊಳಿಸಿ, ವೃಂದ ಮತ್ತು ನೇಮಕಾತಿ ನಿಯಮ (ಸಿ ಮತ್ತು ಆರ್) ತಿದ್ದುಪಡಿ ಆದೇಶ ಪ್ರಕಟಿಸುವ ಮೂಲಕ ಜಂಟಿ ಮತ್ತು ಅಪರ ನಿರ್ದೇಶಕರ ಹುದ್ದೆಗಳಿಗೆ ಪದೋನ್ನತಿ ನೀಡಬೇಕು. ಆದರೆ ಈ ಬಗ್ಗೆ ಗಮನಹರಿಸದ ಅಧಿಕಾರಿಗಳು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ವೈದ್ಯರ ಮನೋಸ್ಥೈರ್ಯ ಕುಗ್ಗಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯ ನಿರ್ಧಾರಗಳು ವೈದ್ಯರಿಗೆ ಮಾರಕವಾಗಿವೆ. ನಿಯಮ ತಿದ್ದುಪಡಿ ಮಾಡದೆಯೇ ದಿನಕ್ಕೊಂಡು ಆದೇಶ ಹೊರಡಿಸಲಾಗುತ್ತಿದೆ. ಈ ಬಗ್ಗೆ ಕ್ರಮವಹಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹೋರಾಟದ ಅನಿವಾರ್ಯತೆ ಕುರಿತು ಎಚ್ಚರಿಸಿದೆ.

ವೈದ್ಯರ ಮನವಿ ಏನು?

ಸ್ನಾತಕೋತ್ತರ ವ್ಯಾಸಂಗದ ಅವಧಿಯಲ್ಲಿ ನೀಡಿದ ಬಾಂಡ್ ಅವಧಿಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಬೇಕು. ವ್ಯಾಸಂಗ ಮುಗಿಸಿ ಕನಿಷ್ಠ 10 ವರ್ಷ ಕಾರ್ಯನಿರ್ವಹಿಸಿದ ಹಾಗೂ ಜ್ಯೇಷ್ಠತೆ ಆಧಾರದ ಮೇಲೆ ಜಿಲ್ಲಾ ಶಸಚಿಕಿತ್ಸಕರು ಅಥವಾ ಮೇಲ್ದರ್ಜೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಹುದ್ದೆಗಳಿಗೆ ಪರಿಗಣಿಸಬೇಕು. ಆಡಳಿತಾತ್ಮಕ ಹುದ್ದೆಗಳಿಗೆ ನಿಗದಿಪಡಿಸಿರುವ ಮಾನದಂಡದಂತೆ 3/4 ವರ್ಷ ಅವಧಿ ಪೂರ್ಣಗೊಳ್ಳದ ವೈದ್ಯಾಧಿಕಾರಿಗಳನ್ನು ಈಗಿರುವ ಸ್ಥಳದಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ವೈದ್ಯರಾಗಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಿದ ಅವಧಿಯನ್ನು ಆಡಳಿತಾತ್ಮಕ ಹುದ್ದೆಗಳಿಗೆ ಪರಿಗಣಿಸಬೇಕು. 2025-26ನೇ ಸಾಲಿನಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ವರ್ಗಾವಣೆಗೊಂಡ ವೈದ್ಯಾಧಿಕಾರಿಗಳು ಅಥವಾ ತಜ್ಞರನ್ನು ಸೇವಾ ಹಿರಿತನ ಆಧಾರದ ಮೇಲೆ ಆಡಳಿತಾತ್ಮಕ ಹುದ್ದೆಗಳಿಗೆ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net