ಮುಜರಾಯಿ ದೇವಸ್ಥಾನಗಳ ದುರಸ್ತಿಗೆ ಮುಂದಾಗದ ಸರ್ಕಾರ

Published on

ನಾಗಮಂಗಲ:ಶಿಥಿಲಾವಸ್ಥೆಯಲ್ಲಿರುವ ಮುಜರಾಯಿ ದೇವಸ್ಥಾನಗಳ ದುರಸ್ತಿಗೆ ಸರ್ಕಾರ ಗಮನಹರಿಸುತ್ತಿಲ್ಲ ಎಂದು ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ದೂರಿದರು.


ಗ್ರಾಮೀಣ ಪ್ರದೇಶದಲ್ಲಿರುವ ಬಹುತೇಕ ಮುಜರಾಯಿ ದೇವಸ್ಥಾನಗಳು ಶಿಥಿಲಾವಸ್ಥೆಯಲ್ಲಿವೆ. ಕಟ್ಟಡಗಳು ಬೀಳುವ ಹಂತ ತಲುಪಿವೆ. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿಗೆ ಅಲೆದು ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಪೂಜಾ ಸಾಮಗ್ರಿಗಳ ನಿರ್ವಹಣೆಗೆಂದು ಅರ್ಚಕರಿಗೆ ಪ್ರತಿ ಆರು ತಿಂಗಳಿಗೊಮ್ಮೆ ತಸ್ತಿಕ್ ಹಣ ನೀಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಅರ್ಚಕರಿಗೆ ತಸ್ತಿಕ್ ಹಣ ಕೊಡುವ ಬದಲಿಗೆ ಗೌರವ ಸಂಭಾವನೆ ನೀಡಿದರೆ ಅನುಕೂಲವಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.


ಅನಾರೋಗ್ಯ ಅಥವಾ ಇನ್ನಿತರೆ ಕಾರಣಗಳಿಂದ ಅರ್ಚಕರು ಮೃತಪಟ್ಟರೆ 2 ಲಕ್ಷ ರೂ.ಪರಿಹಾರ ನೀಡುವುದಾಗಿ ಈ ಹಿಂದೆ ಸರ್ಕಾರ ಘೋಷಿಸಿತ್ತು. ಸರ್ಕಾರ ಘೋಷಣೆ ಮಾಡಿದ ನಂತರ ರಾಜ್ಯದಲ್ಲಿ 1264 ಜನ ಅರ್ಚಕರು ಮೃತಪಟ್ಟಿದ್ದಾರೆ. ಈವರೆಗೂ ಯಾರೊಬ್ಬರಿಗೂ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.


ಮುಜರಾಯಿ ವ್ಯಾಪ್ತಿಯ ಎ, ಬಿ ಮತ್ತು ಸಿ ದರ್ಜೆಯ ದೇವಾಲಯಗಳಲ್ಲಿ ನಡೆಯುವ ರಥೋತ್ಸವಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿತ್ತು. ಎ ಮತ್ತು ಬಿ ದರ್ಜೆಯ ದೇವಾಲಯಗಳು ಆದಾಯದಲ್ಲಿರುವುದರಿಂದ ಇಂದಿಗೂ ರಥೋತ್ಸವಗಳು ಮುಂದುವರಿಯುತ್ತಿವೆ. ಆದರೆ ಸಿ ದರ್ಜೆಯ ದೇವಾಲಯಗಳಿಗೆ ಹಣ ಬಿಡುಗಡೆಯಾಗದ ಕಾರಣ ರಥೋತ್ಸವಗಳು ನಿಂತು ಹೋಗುತ್ತಿವೆ. ದೇವಸ್ಥಾನಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ನೀಡುತ್ತಿಲ್ಲ. ಅರ್ಚಕರು ತಸ್ತಿಕ್ ಹಣದಲ್ಲೇ ವಿದ್ಯುತ್ ಶುಲ್ಕ ಭರಿಸಬೇಕಿದೆ ಎಂದು ಸಮಸ್ಯೆ ವಿವರಿಸಿದರು.
ಸಂಘದ ಕಾರ್ಯದರ್ಶಿ ಬಿ.ಕೆ.ಲೋಕೇಶ್‌ಕುಮಾರ್, ಖಜಾಂಚಿ ಪ್ರಸನ್ನ ಶೈವ, ನಿರ್ದೇಶಕರಾದ ರಾಜೀವಲೋಚನ, ಲಕ್ಷ್ಮೀನಾರಾಯಣ, ಎಚ್.ಪಿ.ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net