

ಶ್ರೀರಂಗಪಟ್ಟಣ: ರಾಜ್ಯ ಸರ್ಕಾರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನೂರಾರು ಕೋಟಿ ರೂ. ಅನುದಾನ ನೀಡಿ ಮಾದರಿ ಕ್ಷೇತ್ರವನ್ನಾಗಿ ನಿರ್ಮಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಗುರುವಾರ ಸರ್ಕಾರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ನಿರ್ಮಾಣ, ವಿರಿಜಾ ಉಪನಾಲೆ, ಬರ್ಗಿ ನಾಲೆ ಅಭಿವೃದ್ದಿ ಹಾಗೂ ಮಹದೇವಪುರ ಮತ್ತು ಬೋರೆ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ನೂತನ ಕೊಠಡಿ ನಿರ್ಮಾಣ ಸೇರಿದಂತೆ 15 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಮಹದೇವಪುರ ಗ್ರಾಮ ವ್ಯಾಪ್ತಿಯಲ್ಲಿ ಬರುವ ಬರ್ಗಿ ಉಪನಾಲೆಯ ನವೀಕರಣ 10 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಅದೇ ಮೊತ್ತದ ಮತ್ತೊಂದು ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರ ಪ್ರಾರಂಭವಾಗಲಿದೆ. ಕಸಬಾ ಹೋಬಳಿ ವ್ಯಾಪ್ತಿಯ ಎಲ್ಲ ಉಪನಾಲೆಗಳ ಆಧುನೀಕರಣ ನಾಲೆಯ ಏರಿಯೂ ಸೇರಿದಂತೆ ಗುಣಮಟ್ಟದ ಕಾಮಗಾರಿಗಳ ಮೂಲಕ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರ ಕೃಷಿ ಜಮೀನುಗಳಿಗೆ ಕಾವೇರಿ ನೀರು ತಲುಪಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಈ ಹಿಂದೆ ಶಿಥಿಲಾವಸ್ಥೆಯಲ್ಲಿದ್ದ ಮಹದೇವಪುರ ಗ್ರಾಮದ ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ದುರಸ್ತಿಗೊಳಿಸಲಾಗಿದ್ದು, ಇದರ ಅಭಿವೃದ್ಧಿ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಯಿತು. ಈ ವೇಳೆ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸಚಿವರು ಸೂಚನೆ ನೀಡಿ 2 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾರೆ. ಅಂತೆಯೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಒಟ್ಟು 4 ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದಾಳತ್ವದಲಿ,್ಲ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಕ್ಷೇತ್ರವನ್ನು ಮಾದರಿಯನ್ನಾಗಿ ಅಭಿವೃದ್ದಿಗೊಳಿಸಲು ರಾಜ್ಯ ಸರ್ಕಾರ ಸಹಕಾರ ನೀಡಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಿತ್ರಾ ಶಿವಕುಮಾರ್, ಉಪಾಧ್ಯಕ್ಷೆ ನಿಂಗಮ್ಮ ಮಹದೇವು, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಪುಟ್ಟಸ್ವಾಮಿ, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಸವರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಕಾಳೇಗೌಡ, ಎಪಿಎಂಎಸಿ ಮಾಜಿ ಅಧ್ಯಕ್ಷ ಎ.ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೀಶ್, ಮಾಜಿ ಉಪಾಧ್ಯಕ್ಷ ರಾಜು, ಭೂ ನ್ಯಾಯ ಮಂಡಳಿ ಮಾಜಿ ನಿರ್ದೇಶಕ ಕೆ.ಪುಟ್ಟಸ್ವಾಮಿ, ಪುರುಷೋತ್ತಮ್, ಶಶಿ, ರವಿ, ನಟರಾಜು, ಪ್ರಸನ್ನ, ಜಯರಾಮೇಗೌಡ, ಪಟೇಲ್ ಶಿವರಾಮೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಟಿಎಚ್‌ಒ ಆಶಾಲತಾ, ಕೆಆರ್‌ಎಸ್ ಜಲಾಶಯದ ಅಧೀಕ್ಷಕ ಇಂಜಿನಿಯರ್ ಜಯಂತ್ ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.