

ಪಿರಿಯಾಪಟ್ಟಣ: ಕುಂಬಾರ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ಪಟ್ಟಣದ ಒಕ್ಕಲಿಗರ ಬೀದಿಯಲ್ಲಿರುವ ಶ್ರೀ ರಾಮ ಸಮುದಾಯ ಭವನದಲ್ಲಿ ತಾಲೂಕು ಕುಂಬಾರ ಸಂಘದ ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕುಂಬಾರ ಸಮುದಾಯದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಕಾರದೊಂದಿಗೆ ಮತ್ತು ಸಚಿವರಾದ ಕೆ.ವೆಂಕಟೇಶ್ ಅವರು ಹಿಂದುಳಿದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕುಂಬಾರ ಸಮಾಜದ ಬಗ್ಗೆಯೂ ಹೆಚ್ಚಿನ ಕಳಕಳಿ ಮತ್ತು ಅಭಿಮಾನ ಹೊಂದಿದ್ದಾರೆ ಎಂದರು.
ತಾಲೂಕಿನಲ್ಲಿ ಕುಂಬಾರ ಸಮುದಾಯದವರು ಹೆಚ್ಚು ವಾಸವಾಗಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯ ಭವನ ನಿರ್ಮಾಣ ಸೇರಿದಂತೆ ಸರ್ಕಾರದ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ತಾಲೂಕು ಕೇಂದ್ರದಲ್ಲಿ ಕುಂಬಾರ ಸಮಾಜದ ಸಮುದಾಯ ಭವನ ನಿರ್ಮಿಸಲು 20 ಗುಂಟೆ ಜಾಗ ನೀಡಬೇಕು ಎಂಬ ಬೇಡಿಕೆಯ ಜತೆಗೆ, ಈಗಿರುವ ಸ್ಮಶಾನಕ್ಕೆ ತಂತಿ ಬೇಲಿ ವ್ಯವಸ್ಥೆ ಹಾಗೂ ಶೆಡ್ ನಿರ್ಮಾಣ ಸೇರಿದಂತೆ ಮೂಲ ಸೌಲಭ್ಯಗಳ ಬಗ್ಗೆ ಕೆ.ವೆಂಕಟೇಶ್ ಅವರೊಂದಿಗೆ ಚರ್ಚಿಸಿ ಅಗತ್ಯ ಸಹಕಾರ ಮತ್ತು ನೆರವು ನೀಡಲಾಗುವುದು ಎಂದರು.
ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಪ್ರಕಾಶ್ ಮಾತನಾಡಿ, ಕುಂಬಾರ ಸಮಾಜದಲ್ಲಿ ಅವಕಾಶ ವಂಚಿತರ ಪರವಾಗಿ ಸರ್ಕಾರ ನಿಲ್ಲಬೇಕು. ಲಕ್ಷ್ಮೀಸಾಗರ್ ಹೊರತುಪಡಿಸಿ ಈ ಸಮಾಜದಿಂದ ಬೇರೆ ಯಾರೂ ರಾಜಕೀಯ ಸ್ಥಾನಮಾನ ಪಡೆಯಲು ಯಾವ ಪಕ್ಷಗಳು ಮನಸ್ಸು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದಕ್ಕಾಗಿ ಇರುವ ವಿಧಾನ ಪರಿಷತ್ ಹಾಗೂ ನಿಗಮ, ಮಂಡಳಿಗಳು ಹಣವಂತರು ಹಾಗೂ ಬಲಾಢ್ಯರಿಗೆ ಮಾರಾಟವಾಗುತ್ತಿವೆ. ಹೀಗಿರುವಾಗ ನೊಂದ ಸಮಾಜಗಳು ತಮ್ಮ ಧ್ವನಿಯನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ವಿಷಾದಿಸಿದರು.
ನಮ್ಮ ಸಮುದಾಯ ಸಂಘಟಿತರಾಗದಿದ್ದರೆ ಯಾರೊಬ್ಬರೂ ನಮನ್ಮು ಗಮನಿಸುವುದಿಲ್ಲ. ಹಾಗಾಗಿ ನಮ್ಮ ಕೂಗನ್ನು ಸರ್ಕಾರ ಗಮನಿಸಲಿ ಎಂದು ಮೈಸೂರಿನಲ್ಲಿ ಬಹುದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ವೆಂಕಟೇಶ್, ಎಚ್.ಸಿ.ಮಹದೇವಪ್ಪ ಸೇರಿದಂತೆ ಸಚಿವ ಸಂಪುಟದ ಪ್ರಮುಖ ಸಚಿವರು ಹಾಗೂ ಈ ಭಾಗದ ಎಲ್ಲ ಶಾಸಕರು ಭಾಗವಹಿಸಲಿದ್ದು, ನಮ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಂಘದ ತಾಲೂಕು ಅಧ್ಯಕ್ಷ ಕೆಳಗನಹಳ್ಳಿ ಸೋಮಶೇಖರ್, ಬಣ್ಣ ಮತ್ತು ಅರಗು ನಿಗಮದ ಅಧ್ಯಕ್ಷ ಎಚ್.ಡಿ.ಗಣೇಶ್, ಕುಂಬಾರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಮ್ಮ, ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ವೆಂಕಟೇಶ್, ಮೈಸೂರು ತಾಲೂಕು ಅಧ್ಯಕ್ಷ ಬಾಲಕೃಷ್ಣ, ತಾಲೂಕು ಗೌರವಾಧ್ಯಕ್ಷ ಮಹೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಸುರೇಶ್, ಮುಖಂಡರಾದ ರಾಮಣ್ಣ, ಕೊಪ್ಪ ರಾಮಚಂದ್ರ, ಸ್ವಾಮಿ ಶೆಟ್ಟಿ, ಸೀಗೂರು ರಮೇಶ್, ಮಾದಶೆಟ್ಟಿ, ನಾಗರಾಜ್, ಅರುಣ್, ಸಣ್ಣಶೆಟ್ಟಿ, ಸುರೇಶ್, ಕೊಣಸೂರು ಪ್ರಭು, ಬಸವಶೆಟ್ಟಿ, ವೀರಭದ್ರಶೆಟ್ಟಿ, ವಿಷ್ಣುವರ್ಧನ್, ಗೊರಳ್ಳಿ ರಾಜಣ್ಣ, ರಾಮಚಂದ್ರ, ವೆಂಕಟೇಶ್, ಪ್ರಸನ್ನ, ಜಗದೀಶ್, ರಾಜನಬಿಳುಗುಲಿ ಲೋಕೇಶ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.