ಖರಗ್‌ಪುರ ಐಐಟಿನಲ್ಲಿ ಸೀಟು ಪಡೆದ ಸರ್ಕಾರಿ ಕಾಲೇಜು ವಿದ್ಯಾರ್ಥಿ

sankethraj
Published on

ಬೆಂಗಳೂರು: ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವ ಸಮಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಯೊಬ್ಬ ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ ಖರಗ್‌ಪುರದಲ್ಲಿ ಬಿ.ಟೆಕ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾನೆ.

ಗೌರಿಬಿದನೂರಿನ ಸರ್ಕಾರಿ ಎಸ್‌ಎಸ್‌ಇಎ ಪಿಯು ಕಾಲೇಜಿನ ವಿದ್ಯಾರ್ಥಿ ಎನ್. ಸಂಕೇತ್ ರಾಜ್ ಎಂಬ ವಿದ್ಯಾರ್ಥಿ ಸಾಧನೆ ಮಾಡುವ ಜತೆಗೆ ಮಾದರಿಯಾಗಿದ್ದಾನೆ.

ಈ ಕುರಿತು ಅನಿಸಿಕೆ ಹಂಚಿಕೊಂಡಿರುವ ಸಂಕೇತ್ ರಾಜ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಕಾಲೇಜು ವಿಜ್ಞಾನ ವಿದ್ಯಾರ್ಥಿಗಳಿಗೆ ಜಾರಿಗೊಳಿಸಿದ ನೀಟ್, ಸಿಇಟಿ ಹಾಗೂ ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಕ್ರಮ ಆರಂಭ ಮಾಡಿದ್ದು ತುಂಬಾ ಅನುಕೂಲವಾಯಿತು. ಅದರ ಜತೆಗೆ ಯೂಟ್ಯೂಬ್ ವೀಡಿಯೋಗಳು ಹೆಚ್ಚು ಉಪಕಾರಿಯಾಯಿತು. ನಿರಂತರ ಕಠಿಣ ಪರಿಶ್ರಮ, ಸಮರ್ಪಣೆಯಿಂದ ಸಾಧ್ಯವಾಯಿತು ಎಂದು ಸಂತಸ ಹಂಚಿಕೊಂಡಿದ್ದಾರೆ.

ಜೆಇಇ ಅಡ್ವಾನ್ಸ್‌ಡ್‌ನಲ್ಲಿ ಎಸ್‌ಸಿ ಕೆಟಗರಿಯಲ್ಲಿ 1,842ನೇ ರ‌್ಯಾಂಕ್ ಬಂದಿದೆ. ಐಐಟಿ ಖರಗ್‌ಪುರದಲ್ಲಿ ಮೆಟಾಲಾಜಿಕಲ್, ಮೆಟೀರಿಯಲ್ ಸೈನ್ಸ್ ಮತ್ತು ಇಂಜಿನಿಯರಿಂಗ್‌ನಲ್ಲಿ ಸೀಟು ಸಿಕ್ಕಿದೆ. ನನಗೆ ಕಂಪ್ಯೂಟರ್ ಸೈನ್ಸ್‌ನಲ್ಲಿ ಮುಂದುವರಿಯುವ ಆಸಕ್ತಿ ಇದೆ. ಮುಂದೆನಾಗುತ್ತದೆಯೋ ನೋಡೋಣ. ಒಂದು ವೇಳೆ ಕಂಪ್ಯೂಟರ್ ಸೈನ್ಸ್ ಸಿಗದಿದ್ದರೆ, ಮತ್ತೊಮ್ಮೆ ಮುಂದಿನ ವರ್ಷ ಪ್ರಯತ್ನ ಮಾಡುವ ಆಲೋಚನೆಯಲ್ಲಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ತಂದೆ ಎನ್. ನಾಗರಾಜ್ ಮತ್ತು ತಾಯಿ ಸುಬ್ಬಮ್ಮ ಇಬ್ಬರೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಮವಾಗಿ ಸಮಾಜ ವಿಜ್ಞಾನ ಮತ್ತು ಗಣಿತ ಶಿಕ್ಷಕರಾಗಿದ್ದಾರೆ. ಇವರು ಕೂಡ ಪ್ರತಿದಿನ ನನಗೆ ಮಾರ್ಗದರ್ಶನ ಮಾಡಿದ್ದು ಪರೀಕ್ಷೆಯನ್ನು ಅನುಕೂಲವಾಯಿತು. ಈ ರ‌್ಯಾಂಕ್ ಪಾಲಕರಿಗೂ ಖುಷಿ ತಂದಿದೆ ಎಂದರು.

ಸಂಕೇತ್ ರಾಜ್ ಅವರ ಐಐಟಿ ಖರಗ್‌ಪುರ್ ಪ್ರವೇಶ ಒಂದು ಹೆಮ್ಮೆಯ ಕ್ಷಣ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಬದ್ಧತೆಯ ಪ್ರಬಲ ದೃಢೀಕರಣವಾಗಿದೆ. ಅವರ ಯಶಸ್ಸು ಆದರ್ಶ ಶಾಲಾ ಉನ್ನತೀಕರಣ ಮತ್ತು ಕೆಸಿಇಟಿ, ನೀಟ್ ಮತ್ತು ಜೆಇಇಗೆ ಉಚಿತ ತರಬೇತಿಯಂತಹ ಕಾರ್ಯಕ್ರಮಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. - ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net