ರೈತರ ದಿಕ್ಕು ತಪ್ಪಿಸುವ ಸರ್ಕಾರ

17 rtl 05
Published on

ರಟ್ಟಿಹಳ್ಳಿ: ಫಲವತ್ತಾದ ಭೂಮಿಯನ್ನು ಅಧಿಕಾರಿಗಳು ರಾತ್ರೋರಾತ್ರಿ ಕಬಳಿಸಿ ಶಿಕಾರಿಪುರ ಏತ ನೀರಾವರಿ ಯೋಜನೆ ಕಾಮಗಾರಿಗೆ ಬಳಸುತ್ತಿದ್ದಾರೆ. ಯೋಜನೆಗೆ ಬರಡು ಭೂಮಿಯನ್ನು ಬಳಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ, ಜಿಲ್ಲಾಧಿಕಾರಿ, ನೀರಾವರಿ ಇಲಾಖೆ ಅಧಿಕಾರಿಗಳು ಈ ಮಾರ್ಗದಲ್ಲಿ ಬಂದು ಪರಿಶೀಲಿಸಲಿ ಎಂದು ಹಿರಿಯ ವಕೀಲ ಬಿ.ಡಿ. ಹಿರೇಮಠ ಆಗ್ರಹಿಸಿದರು.

ತಾಲೂಕಿನ ಮೇದೂರ ಗ್ರಾಮದಲ್ಲಿ ಭಾನುವಾರ 4ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರ ರೈತರ ದಿಕ್ಕು ತಪ್ಪಿಸುತ್ತಿದೆ. ಯೋಜನೆ ಕುರಿತು ತಾಲೂಕಿನ ಒಟ್ಟು 18 ಗ್ರಾಮಗಳ ರೈತರನ್ನು ಕರೆದು ಸಭೆ ನಡೆಸದೇ, ಮಾಹಿತಿಯನ್ನೂ ನೀಡದೇ ಪೈಪ್​ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಕೆಲ ರೈತರ ಬೋರ್​ವೆಲ್ ಸೇರಿದಂತೆ ಅನೇಕ ಬೆಳೆಗಳು ನಾಶವಾಗಿವೆ. ಯೋಜನೆಗೆ ಸಹಕಾರ ನೀಡುತ್ತಿರುವ ಹಾವೇರಿ ಜಿಲ್ಲಾಧಿಕಾರಿಯನ್ನು ಮೊದಲು ವರ್ಗಾವಣೆ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕಾರಿಪುರ ತಾಲೂಕಿನಲ್ಲಿಯೂ ಪಾದಯಾತ್ರೆ ಕೈಗೊಂಡು ಅಲ್ಲಿ ಪೈಪ್​ಲೈನ್ ಕಾಮಗಾರಿ ಯಾವ ರೀತಿ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು ಎಂದರು.

ಶನಿವಾರ ಸಂಜೆ ಮೇದೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಹೋರಾಟಗಾರರು ಭಾನುವಾರ ಬೆಳಗ್ಗೆ ಯತ್ನಹಳ್ಳಿ, ಕೋಡಮಗ್ಗಿ, ತಿಪ್ಪಾಯಿಕೊಪ್ಪ ಗ್ರಾಮಗಳ ಪೈಪ್​ಲೈನ್ ಮಾರ್ಗವಾಗಿ ವೀರಾಪುರ ಗ್ರಾಮಕ್ಕೆ ಆಗಮಿಸಿ ವಾಸ್ತವ್ಯ ಹೂಡಿದರು.

ರೈತ ಮುಖಂಡರಾದ ರಂಗಪ್ಪ ಬಡಪ್ಪಳವರ, ಉಜಿನೆಪ್ಪ ಕೋಡಿಹಳ್ಳಿ, ವಿನಯ ಪಾಟೀಲ, ಹರೀಶ ಇಂಗಳಗೊಂದಿ, ರಾಜಶೇಖರ ಪಾಟೀಲ, ವಸಂತ್ ದ್ಯಾವಕ್ಕಳವರ, ಎಸ್.ಡಿ. ಹಿರೇಮಠ, ಪ್ರಭು ಸೊರಟೂರು, ಕರಬಸಪ್ಪ ಬನ್ನಿಕೋಡ, ಪರ್ವತಗೌಡ ಅಜಗೋಳ, ಚಾಮರಾಜ ಪಾಟೀಲ, ಮಂಜುನಾಥ ಕತ್ತಗಿ, ಸುಭಾಷ ಸುತ್ತಕೋಟಿ, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net